Published
1 hour agoon
By
Akkare News
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಮಹತ್ವದ ಹಾಗೂ ಐತಿಹಾಸಿಕ ಯೋಜನೆಗೆ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರಕಾರ ಘೋಷಿಸಿದ್ದು, ಯೋಜನೆಗೆ ಅಧಿಕೃತ ಚಾಲನೆ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. 
ರಾಜ್ಯದಲ್ಲಿ ವಾಸವಿದ್ದು, ಇಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ, ರಾಜ್ಯದಲ್ಲಿ ವಾಸ್ತವ್ಯವಿದ್ದು, ನೆರೆ ರಾಜ್ಯಗಳ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಹಾಗೂ ನೆರೆ ರಾಜ್ಯಗಳಲ್ಲಿ (ರಾಜ್ಯದ ಗಡಿಭಾಗದಲ್ಲಿ) ವಾಸ್ತವ್ಯವಿದ್ದು, ರಾಜ್ಯದೊಳಗಿನ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್ ಪಾಸ್ ಸೌಲಭ್ಯ ಅನ್ವಯಿಸಲಿದ್ದು, ಈ ಯೋಜನೆಗಾಗಿ ಸರ್ಕಾರ ಒಟ್ಟು 286 ಕೋಟಿ ರೂಪಾಯಿ ವೆಚ್ಚ ಭರಿಸಲಿದೆ.
ಈಗಾಗಲೇ ಹಣ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಪಡೆದಿರುವ ಬಸ್ ಪಾಸ್ ಗಳು ಮಾನ್ಯವಾಗಲಿದ್ದು, ಅವರು ಪಾವತಿಸಿರುವ ಮೊತ್ತವನ್ನು 15 ದಿನಗಳ ಒಳಗಾಗಿ ರಿಫಂಡ್ (ಮರುಪಾವತಿ) ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಯು ಬಸ್ ಪಾಸ್ ಕಳೆದುಕೊಂಡಲ್ಲಿ, ಶಿಕ್ಷಣ ಸಂಸ್ಥೆ ಬದಲಾದಲ್ಲಿ, ವಿದ್ಯಾರ್ಥಿಯ ವಾಸಸ್ಥಳ ಬದಲಾವಣೆಯಾದಲ್ಲಿ, ಬಸ್ ಪಾಸ್ ಹಾಳಾದ ಸಂದರ್ಭಗಳಲ್ಲಿ 100/- ಸಂಸ್ಕರಣಾ ಶುಲ್ಕ ಮಾತ್ರ ವಿಧಿಸಲು ಆದೇಶದಲ್ಲಿ ತಿಳಿಸಲಾಗಿದೆ. ಜೂನ್ 12 ರಿಂದ ತಕ್ಷಣ ಈ ಆದೇಶ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಿ ಸರಕಾರದ ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದು ಕೆ ಎಸ್ ಆರ್ ಟಿ ಸಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 




