Published
2 hours agoon
By
Akkare News
ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆಯ ತರಕಾರಿ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಭಾರಿ ಆಘಾತ ಎದುರಾಗಿದೆ. ನಿತ್ಯದ ಊಟಕ್ಕೆ ಅತಿ ಅತ್ಯಗತ್ಯವಾಗಿರುವ ಅಕ್ಕಿಯ ಬೆಲೆಯಲ್ಲಿ ದಿಢೀರ್ ಭಾರಿ ಏರಿಕೆ ಕಂಡುಬಂದಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ವಿವಿಧ ತಳಿಯ ಅಕ್ಕಿಗಳ ದರವು ಪ್ರತಿ ಕೆಜಿಗೆ 10 ರೂಪಾಯಿಯಿಂದ 20 ರೂಪಾಯಿಯವರೆಗೆ ದುಬಾರಿಯಾಗಿದ್ದು, ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳ ಬಜೆಟ್ ಸಂಪೂರ್ಣ ಏರುಪೇರಾಗುವಂತೆ ಮಾಡಿದೆ. 
ಏಕಾಏಕಿ ದರ ಏರಿಕೆಗೆ ಕಾರಣವೇನು?
ಮಾರುಕಟ್ಟೆ ತಜ್ಞರು ಮತ್ತು ಸ್ಥಳೀಯ ವರ್ತಕರು ತಿಳಿಸುವ ಪ್ರಕಾರ, ಅಕ್ಕಿ ಬೆಲೆ ಏರಿಕೆಗೆ ಮುಖ್ಯವಾಗಿ ಪೂರೈಕೆ ಕೊರತೆ ಹಾಗೂ ಹೆಚ್ಚಾದ ರಫ್ತು ಕಾರಣವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಭಾರೀ ಬೇಡಿಕೆ ಇದೆ, ಆದರೆ ಅದಕ್ಕೆ ತಕ್ಕಂತೆ ಮಿಲ್ಲುಗಳಿಂದ ಪೂರೈಕೆಯಾಗುತ್ತಿಲ್ಲ. ಇದೇ ವೇಳೆ, ಕೇಂದ್ರ ಸರ್ಕಾರವು ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ನಿರ್ಬಂಧ ಸಡಿಲಿಸಿ ಅವಕಾಶ ಕಲ್ಪಿಸಿರುವುದರಿಂದ, ಸ್ಥಳೀಯ ಮಾರುಕಟ್ಟೆಯಲ್ಲಿ ದಾಸ್ತಾನು ಗಣನೀಯವಾಗಿ ಕಡಿಮೆಯಾಗಿದೆ. ಕಳೆದೆರಡು ವಾರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಸರಕು ಸಾಗಣೆ ವೆಚ್ಚದ ಹೆಚ್ಚಳ ಕೂಡ ದರದ ಮೇಲೆ ನೇರ ಪರಿಣಾಮ ಬೀರಿದೆ. 
ನವೆಂಬರ್ವರೆಗೆ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ ಗ್ರಾಹಕರಿಗೆ ಸದ್ಯಕ್ಕಂತೂ ಈ ಬೆಲೆ ಏರಿಕೆಯ ಬಿಸಿಯಿಂದ ಮುಕ್ತಿ ಸಿಗುವ ಲಕ್ಷಣಗಳಿಲ್ಲ. ಹಳೆ ದಾಸ್ತಾನು ಖಾಲಿಯಾಗುತ್ತಿದ್ದು, ಭತ್ತದ ಹೊಸ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ ಕನಿಷ್ಠ 4 ರಿಂದ 5 ತಿಂಗಳು ಕಾಯಬೇಕಿದೆ. ಮುಂಗಾರು ಹಂಗಾಮಿನ ಬೆಳೆ ಕೈಸೇರಿ, ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ತಿಂಗಳಿನಲ್ಲಿ ಹೊಸ ಅಕ್ಕಿ ಮಾರುಕಟ್ಟೆಗೆ ಕಾಲಿಡುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಮತ್ತು ವರ್ತಕರು ಸ್ಪಷ್ಟಪಡಿಸಿದ್ದಾರೆ. 




