Published
5 hours agoon
By
Akkare News
ಪುತ್ತೂರು, ಜೂನ್ 13: ಉಪ್ಪಿನಂಗಡಿ ಪಟ್ಟಣದ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಪ್ಪಿನಂಗಡಿ ಅಂಡರ್‌ಪಾಸ್‌ನಿಂದ ಉಪ್ಪಿನಂಗಡಿ ನೇತ್ರಾವತಿ ಸೇತುವೆವರೆಗೆ ಚತುಷ್ಪಥ (ನಾಲ್ಕು ಪಥ) ರಸ್ತೆ ಅಭಿವೃದ್ಧಿಗೆ ₹3 ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಈ ಕಾಮಗಾರಿಯಿಂದ ಉಪ್ಪಿನಂಗಡಿ ಪಟ್ಟಣದ ಪ್ರಮುಖ ರಸ್ತೆ ಭಾಗವು ವಿಸ್ತರಣೆಯಾಗಲಿದ್ದು, ದಿನನಿತ್ಯ ವಾಹನ ಸವಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಹೊಂದಿರುವ ಈ ರಸ್ತೆಯ ಅಭಿವೃದ್ಧಿಯಿಂದ ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದು ಅವರು ಹೇಳಿದರು.
ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದ್ದು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ತಮ್ಮ ಬದ್ಧತೆ ಮುಂದುವರಿಯಲಿದ್ದು, ಜನರ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.




