Published
15 hours agoon
By
Akkare News
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ ಅವರನ್ನು ಟಿಎಂಸಿ ಪಕ್ಷದ ಅಧ್ಯಕ್ಷ ಸ್ಥಾನದಿಂದ “ಕಿತ್ತೊಗೆದಿದ್ದಾರೆ” ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.ಅಲ್ಲದೆ, ತಾವು ಸ್ಥಾಪಿಸಿರುವ ಬಣವೇ “ಅಸಲಿ ಟಿಎಂಸಿ” ಎಂದು ಘೋಷಿಸಿಕೊಂಡಿರುವ ಬಂಡಾಯ ಶಾಸಕರು, ಪಕ್ಷದ ಹಿರಿಯ ನಾಯಕ ಅರೂಪ್ ರಾಯ್ ಅವರನ್ನು ತಮ್ಮ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಉಲುಬೇರಿಯಾ ಪುರ್ಬಾ ಕ್ಷೇತ್ರದ ಶಾಸಕ ಋತಬ್ರತಾ ಬ್ಯಾನರ್ಜಿ, “ನಾವು ಇಂದು (ಸೋಮವಾರ) ವಿಶೇಷ ಅಧಿವೇಶನವನ್ನು ನಡೆಸಿದ್ದು, ಪಕ್ಷದ ಪ್ರತಿನಿಧಿಗಳು ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (National Working Committee) ಆಯ್ಕೆ ಮಾಡಿದ್ದಾರೆ. ಅರೂಪ್ ರಾಯ್ ಅವರು ಪಕ್ಷದ ಆರಂಭದ ದಿನಗಳಿಂದಲೂ ನಮ್ಮೊಂದಿಗಿದ್ದಾರೆ. ಹೊಸ ಸಮಿತಿಗೆ ಇನ್ನುಳಿದ 29 ಸದಸ್ಯರನ್ನು ಆಯ್ಕೆ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ.
ದಂಗೆ ಎದ್ದಿರುವ ಶಾಸಕರು ಮಮತಾ ಬ್ಯಾನರ್ಜಿ ಅವರನ್ನು ಪಕ್ಷದಿಂದ ಸಂಪೂರ್ಣವಾಗಿ ಹೊರಹಾಕಿಲ್ಲ, ಬದಲಿಗೆ ಅವರನ್ನು ಕೇವಲ ‘ಮುಖ್ಯ ಸಲಹೆಗಾರರನ್ನಾಗಿ’ ಮುಂದುವರಿಸಲು ಬಯಸಿದ್ದಾರೆ. ಟಿಎಂಸಿ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಬೇಕು. ಕೊನೆಯದಾಗಿ ಫೆಬ್ರವರಿ 2022 ರಲ್ಲಿ ಸಮಿತಿ ರಚನೆಯಾಗಿತ್ತು. ಹೀಗಾಗಿ ನಿಯಮದಂತೆಯೇ ಹೊಸ ಸಮಿತಿ ರಚಿಸಲಾಗಿದೆ ಎಂದು ಬಂಡಾಯ ನಾಯಕರು ವಾದಿಸಿದ್ದಾರೆ. ಈ ನಿರ್ಧಾರವನ್ನು ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗಕ್ಕೆ ತಿಳಿಸುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ಮಮತಾ ಅವರ ಸೋದರಸೊಸೆ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಹೆಸರನ್ನು ಸಭೆಯಲ್ಲಿ ಚರ್ಚಿಸಿಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 





