Published
17 hours agoon
By
Akkare News
ನವದೆಹಲಿ, ಜುಲೈ 17: ಮೊದಲ ಹಂತದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ 13 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಒಂದೂವರೆ ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆ ಆಗದಿರುವುದು ಕಾಂಗ್ರೆಸ್ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಖಾಲಿ ಇರುವ 20 ಸಚಿವ ಸ್ಥಾನಗಳಿಗೆ 50ಕ್ಕೂ ಹೆಚ್ಚು ಶಾಸಕರು ಮತ್ತು ನಾಯಕರು ಆಕಾಂಕ್ಷಿಗಳಾಗಿದ್ದು, ಅಂತಿಮ ತೀರ್ಮಾನಕ್ಕಾಗಿ ದೆಹಲಿಯಲ್ಲಿ ಸರಣಿ ಸಭೆಗಳು ನಡೆದಿವೆ. ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಮೊದಲಿಗೆ ಸಿದ್ದರಾಮಯ್ಯ, ಬಳಿಕ ಡಿ.ಕೆ. ಶಿವಕುಮಾರ್ ಹಾಗೂ ಅಂತಿಮವಾಗಿ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸಭೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದ್ದು, ತಮ್ಮದೇ ಆದ ಪಟ್ಟಿ ಸಿದ್ಧಪಡಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕ ಸಚಿವರ ಪಟ್ಟಿಯನ್ನು ರಾಹುಲ್ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧಪಡಿಸಿದ್ದ ಮತ್ತೊಂದು ಪಟ್ಟಿಯನ್ನೂ ಪರಿಶೀಲಿಸಿ, ವಿವಿಧ ಅಂಶಗಳನ್ನು ಪರಿಗಣಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಇದೇ ಸಭೆಯಲ್ಲಿ ಖಾಲಿ ಇರುವ ವಿಧಾನಸಭೆ ಸ್ಪೀಕರ್ ಹುದ್ದೆ ಭರ್ತಿ ಕುರಿತೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಸದ್ಯ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಸಭೆಗಳ ಬಳಿಕ ಸಚಿವರ ಪಟ್ಟಿಗೆ ಅಂತಿಮ ರೂಪ ಸಿಕ್ಕಿದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣದ ನಾಯಕರಲ್ಲಿ ಯಾರಿಗೆ ಹೆಚ್ಚು ಅವಕಾಶ ದೊರೆಯಲಿದೆ ಎಂಬುದು ಸಂಪುಟ ವಿಸ್ತರಣೆಯ ಘೋಷಣೆಯ ಬಳಿಕ ಸ್ಪಷ್ಟವಾಗಲಿದೆ.




