Connect with us

ರಾಜಕೀಯ

ಡಿಕೆಶಿ, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ದೆಹಲಿ ಪ್ರಯಾಣ: ಇಂದೇ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್?

Published

on

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇಂದು ದೆಹಲಿಗೆ ತೆರಳಲಿದ್ದು, ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದೆ. ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬರುವ ಲಕ್ಷಣ ದಟ್ಟವಾಗಿ ಕಾಣುತ್ತಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಫೈನಲ್ ಟಚ್ ನೀಡಲಿದ್ದು, ಈ ಸಂಬಂಧ ಸಿಎಂ, ಮಾಜಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಇಂದು ದೆಹಲಿಗೆ ತೆರಳಲಿದ್ದಾರೆ. ಕಳೆದ ವಾರ ಮೂವರು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದರು. ಆದರೆ, ಚರ್ಚೆ ಅಪೂರ್ಣವಾಗಿತ್ತು. ಇದೀಗ ಮೂವರಿಗೆ ಮತ್ತೆ ಹೈ ಕಮಾಂಡ್ ಬುಲಾವ್ ನೀಡಿದ್ದು, ಸಂಪುಟ ವಿಸ್ತರಣೆಗೆ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.ಈ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಮೂರ್ನಾಲ್ಕು ದಿನಗಳಲ್ಲೇ ಸಂಪುಟ ವಿಸ್ತರಣೆಯಾಗೋದು ಖಚಿತವಾಗಿದೆ. ಸಿಎಂ ಸೇರಿ, ಕೆಲವರು ಶಾಸಕರು ದೆಹಲಿಗೆ ತೆರಳಿದ್ದು, ಮಂಗಳವಾರ ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟುಹಬ್ಬದ ಹಾರೈಕೆ ನಂತರ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಕ್ಯಾಬಿನೆಟ್ ವಿಸ್ತರಣೆಗೆ ಅನುಮತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.‌ ಸಚಿವಾಕಾಂಕ್ಷಿಗಳು ಮತ್ತೆ ದೆಹಲಿ ದೌಡು: ಇತ್ತ ಸಿಎಂ ಡಿಕೆಶಿ ದೆಹಲಿಗೆ ತೆರಳುತ್ತಿರುವ ಹಿನ್ನೆಲೆ ಇದಕ್ಕೂ ಮೊದಲೇ ಸಚಿವಾಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ. ನರೇಂದ್ರ ಸ್ವಾಮಿ, ಸಲೀಂ ಅಹಮದ್, ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಆರ್.ಬಿ. ತಿಮ್ಮಾಪೂರ, ಅಜಯ್ ಸಿಂಗ್ ಸೇರಿದಂತೆ ಹಲವು ಶಾಸಕರು ದೆಹಲಿಯತ್ತ ಮುಖ ಮಾಡಿದ್ದಾರೆ. ಇನ್ನೊಂದಷ್ಟು ಕೈ ಶಾಸಕರು ಕಳೆದ 10-15 ದಿನಗಳಿಂದಲೂ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದು, ಲಾಭಿ ಮುಂದುವರಿಸಿದ್ದಾರೆ. ಯುವ ಮುಖ, ಹೊಸ ಮುಖಗಳಿಗೆ ಮಣೆ? ಸಂಪುಟ ವಿಸ್ತರಣೆ ವೇಳೆ ಹೊಸ ಮುಖ, ಯುವ ಮುಖಗಳಿಗೆ ಮಣೆ ಹಾಕುವುದು ಬಹುತೇಕ ಖಚಿತವಾಗಿದೆ. ಕಳೆದ ಬಾರಿ ದೆಹಲಿಗೆ ಹೋಗಿದ್ದಾಗ ರಾಹುಲ್ ಗಾಂಧಿ ಯುವ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸಂಪುಟ ವಿಸ್ತರಣೆ ವೇಳೆ ಹೊಸಬರಿಗೆ ಬಹುತೇಕ ಅವಕಾಶ ಸಿಗುವುದು ಖಚಿತವಾಗಿದೆ. ಮೂರ್ನಾಲ್ಕು ಬಾರಿ ಗೆದ್ದವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂಬ ಚರ್ಚೆ ಬಲವಾಗಿ ಕೇಳಿ ಬರುತ್ತಿದೆ. ಹೊಸದಾಗಿ ಶಾಸಕರಾದವರಿಗೆ ಸಂಪುಟದಲ್ಲಿ ಹೆಚ್ಚಿನ ಸ್ಥಾನ‌ ಸಿಗುವುದು ಅನುಮಾನ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಪೊನ್ನಣ್ಣ, ಪ್ರದೀಪ್ ಈಶ್ವರ್, ನಯನಾ ಮೋಟಮ್ಮ, ರಾಜೇಗೌಡ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ಮೂರು, ನಾಲ್ಕು ಬಾರಿ ಗೆದ್ದಿರುವ ಶಾಸಕರು ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲಿದ್ದಾರೆ.‌ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಎಲ್ಲರೂ ಸಹಜವಾಗಿ ಕೇಳ್ತಾರೆ. ಆದರೆ ನಿರ್ಧಾರ ಮಾಡೋದು ಹೈಕಮಾಂಡ್. ಹೊಸಬರಿಗೆ ಕೊಡಬೇಕು ಅಂತ ರಾಹುಲ್ ಹೇಳಿದ್ದಾರೆ. ಹಳಬರು ಇದ್ದಾರೆ, ಎಲ್ಲರೂ ಅರ್ಹರೇ. ಎಲ್ಲರೂ ಕೇಳ್ತಿದ್ದಾರೆ, ಕೊಡೋದು ಹೈಕಮಾಂಡ್. ಜಾತಿ, ಸಮುದಾಯ ನೋಡಿ ಕೊಡಬೇಕು. ಜಿಲ್ಲಾವಾರು ಪ್ರಾತಿನಿಧ್ಯವನ್ನೂ ನೀಡಬೇಕು. ಎಲ್ಲವನ್ನು ನೋಡಿ ಅವರು ಮಾಡ್ತಾರೆ ಎಂದು ಅಭಿಪ್ರಾಯಪಟ್ಟರು. ಇತ್ತ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿರುವ ಶಾಸಕ ಅಜಯ್ ಸಿಂಗ್, ನನಗೆ ಈ ಬಾರಿ ಅವಕಾಶ ಸಿಗಲಿದೆ. ಎಲ್ಲಾ ನಾಯಕರು ನಮ್ಮ ಪರ ಹೇಳಿದ್ದಾರೆ. ಮುಂದೆ ಬರುವ ದಿನದಲ್ಲಿ ಅವಕಾಶ ಸಿಗಲಿದೆ ಎಂದು ಆಶ್ವಾಸನೆ ಕೊಟ್ಟಿದ್ದರು. ಹೀಗಾಗಿ ನಮಗೆ ಅವಕಾಶ ಕೊಡ್ತಾರೆ. ಯುವಕರಿಗೆ ಆದ್ಯತೆ ನೀಡಿ ಅಂತ ರಾಹುಲ್​ ಗಾಂಧಿ ಹೇಳಿದ್ದರು ಎಂದರು.

ಆಕಾಂಕ್ಷಿಗಳ ಪಟ್ಟಿ ದೊಡ್ಡದು? ಸಚಿವ ಸಂಪುಟ ಸೇರಲು ಬಯಸುವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಈ ಪೈಕಿ ಕೆಲವರು ಸಿದ್ದರಾಮಯ್ಯ ಬಣವಾಗಿದ್ದರೆ, ಇನ್ನೂ ಕೆಲವರು ಸಿಎಂ ಡಿ.ಕೆ. ಶಿವಕುಮಾರ್ ಬಣವಾಗಿದ್ದರೆ, ಇನ್ನೊಂದಷ್ಟು ಶಾಸಕರು ಮಲ್ಲಿಕಾರ್ಜುನ ಖರ್ಗೆ ಬಣದವರಾಗಿದ್ದಾರೆ. ಕೆಲವಷ್ಟು ಶಾಸಕರು ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದಾರೆ.

ಆಕಾಂಕ್ಷಿಗಳ ಪಟ್ಟಿಯಲ್ಲಿ ಮಧು ಬಂಗಾರಪ್ಪ, ಹೆಚ್.ಸಿ. ಮಹದೇವಪ್ಪ, ಪುಟ್ಟರಂಗಶೆಟ್ಟಿ, ದಿನೇಶ್ ಗುಂಡೂರಾವ್, ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ, ಅಜಯ್ ಧರ್ಮಸಿಂಗ್, ರಾಘವೇಂದ್ರ ಹಿಟ್ನಾಳ್, ಹೊಸದುರ್ಗ ಗೋವಿಂದಪ್ಪ, ಸಂತೋಷ್ ಲಾಡ್, ಎಂ.ಸಿ. ಸುಧಾಕರ್/ಶಿವಲಿಂಗೇಗೌಡ, ಪೊನ್ನಣ್ಣ, ಅಶೋಕ್ ಪಟ್ಟಣ್, ಹಂಪನಗೌಡ ಬಾದರ್ಲಿ, ಕೋನರೆಡ್ಡಿ ಇದ್ದಾರೆ.

ಜೊತೆಗೆ ಮಾಗಡಿ ಶಾಸಕ ಬಾಲಕೃಷ್ಣ, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಆನೇಕಲ್ ಶಿವಣ್ಣ, ಶರತ್ ಬಚ್ಚೇಗೌಡ, ಸುಬ್ಬಾ ರೆಡ್ಡಿ, ನಾಗೇಂದ್ರ, ನಾರಾ ಭರತ್ ರೆಡ್ಡಿ, ಶಿವಲಿಂಗೇಗೌಡ, ಶ್ರೀನಿವಾಸ್ ಮಾನೆ, ರುದ್ರಪ್ಪ ಲಮಾಣಿ, ಸಲೀಂ ಅಹಮದ್, ಎನ್.ಎ. ಹ್ಯಾರೀಸ್, ಆರತಿ ಕೃಷ್ಣಾ, ನಯನಾ ಮೋಟಮ್ಮ, ಎಸ್.ಎಸ್. ಮಲ್ಲಿಕಾರ್ಜುನ್, ಶಾಂತನಗೌಡ, ಲಕ್ಷ್ಮಣ ಸವದಿ, ಯಶವಂತರಾಯಗೌಡ ಪಾಟೀಲ್, ಜೆಎಸ್ ಪಾಟೀಲ್ ಆಕಾಂಕ್ಷಿಗಳಾಗಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement