Published
7 months agoon
By
Akkare Newsನವದೆಹಲಿ: ದೇಶದ್ಯಾಂತ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ ಮತ್ತು ನಾನು ಒಟ್ಟಿಗೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಅದು ಬಿಜೆಪಿಗೆ ಲಾಭವಾಗುತ್ತಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ 15 ದಿನಗಳಿಂದ ನಾನು ರಾಯ್ ಬರೇಲಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಗಾಂಧಿ ಕುಟುಂಬಕ್ಕೂ ರಾಯ್ ಬರೇಲಿಗೂ ಹಳೆಯ ಸಂಬಂಧವಿದೆ. ನಾವು ರಿಮೋಟ್ ಕಂಟ್ರೋಲ್ ಮೂಲಕ ಇಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಮತ್ತು ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿತ್ತು.
ಕೊನೇ ಕ್ಷಣದಲ್ಲಿ ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅವರನ್ನ ಹೈಕಮಾಂಡ್ ಕಣಕ್ಕಿಳಿಸಿದೆ. ಈ ನಡುವೆ ಪ್ರಿಯಾಂಕಾ ಸ್ಪರ್ಧೆಯಿಂದ ಹಿಂದೆ ಸರಿದ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿತ್ತು.
ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕಣಕ್ಕಿಳಿಸಿದ್ದು, ಅವರು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೆಣಸಲಿದ್ದಾರೆ.
ಗಾಂಧಿ ಕುಟುಂಬದ ಭದ್ರ ಕೋಟೆ ಎನಿಸಿಕೊಂಡಿದ್ದ ಕ್ಷೇತ್ರದಲ್ಲಿ ಕಿಶೋರಿ ಲಾಲ್ ಶರ್ಮಾ ಅವರಿಗೆ ಟಿಕೆಟ್ ನೀಡಿರುವುದು ಅಚ್ಚರಿಕೆ ಬೆಳವಣಿಯಾಗಿದೆ. ಕಳೆದ 4 ದಶಕಗಳಿಂದ ಗಾಂಧಿ ಕುಟುಂಬದ ಜೊತೆಗೆ ನಂಟು ಹೊಂದಿರುವ ಕಿಶೋರಿ ಲಾಲ್ ಶರ್ಮಾ, ಮೂಲತಃ ಪಂಜಾಬ್‍ನ ಲೂಧಿಯಾನದವರು.
1983ರಲ್ಲಿ ರಾಜೀವ್ ಗಾಂಧಿಯವರೊಂದಿಗೆ ರಾಯ್ ಬರೇಲಿ ಮತ್ತು ಅಮೇಥಿ ಪ್ರವೇಶಿಸಿದ ಅವರು, ಈಗಲೂ ಕ್ಷೇತ್ರದ ನಿರಂತರ ಸಂಪರ್ಕದಲ್ಲಿದ್ದಾರೆ. ಮೇ 1991ರಲ್ಲಿ ರಾಜೀವ್ ಗಾಂಧಿಯವರ ಮರಣದ ನಂತರ, ಗಾಂಧಿ ಕುಟುಂಬದೊಂದಿಗಿನ ಅವರ ಒಡನಾಟ ಇನ್ನೂ ಹೆಚ್ಚಾಯಿತು.
ಸೋನಿಯಾ ಗಾಂಧಿ ಅವರು ರಾಜಕೀಯಕ್ಕೆ ಪ್ರವೇಶಿಸಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಕಿಶೋರಿ ಲಾಲ್ ಶರ್ಮಾ ಅವರ ಜೊತೆಗಿದ್ದರು. ಸೋನಿಯಾ ಗಾಂಧಿಯವರು ಅಮೇಥಿ ಕ್ಷೇತ್ರವನ್ನು ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟು ರಾಯ್‍ಬರೇಲಿಯಲ್ಲಿ ಸ್ಪರ್ಧಿಸಿದ ಬಳಿಕ ಎರಡು ಕ್ಷೇತ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಹಿನ್ನಲೆ ಅವರಿಗೆ ಟಿಕೆಟ್ ನೀಡಲಾಗಿದೆ.