Published
7 months agoon
By
Akkare Newsಮಂಗಳೂರು: ಕಂಕನಾಡಿಯ ಒಳ ರಸ್ತೆಯೊಂದರಲ್ಲಿ ನಾಲ್ಕಾರು ಜನ ಮಸೀದಿಯ ಗೇಟ್ ಬಳಿ ರಸ್ತೆಯಲ್ಲಿ ನಮಾಝ್ ಮಾಡಿದ ಘಟನೆ ಆಕಸ್ಮಿಕವಾಗಿ ನಡೆದಿರುವಂತದ್ದು. ಸಾರ್ವಜನಿಕರಿಗೆ ತೊಂದರೆಯಾಗುವಂತಹ ಯಾವುದೇ ವಿಚಾರವನ್ನೂ ಒಪ್ಪುವಂತದ್ದಲ್ಲ. ಆದರೆ ಈ ಪ್ರಕರಣ ಅಷ್ಟು ಗಂಭೀರವೂ ಅಲ್ಲ. ಪೊಲೀಸರು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಮುಂದೆ ಈ ರೀತಿ ನಡೆಯದಂತೆ ಜಾಗೃತೆ ವಹಿಸಲು ಸೂಚಿಸಬಹುದಿತ್ತು. ಪೊಲೀಸರೇ ಏಕಾಏಕಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.
ಪ್ರಾರ್ಥನೆ, ನಮಾಝ್ ಎನ್ನುವುದು ಆತ್ಮ ಹಾಗೂ ಪರಮಾತ್ಮನ ನಡುವೆ ನಡೆಯುವ ಒಂದು ಪವಿತ್ರ ಸಂವಹನ ಎನ್ನುವುದು ಪ್ರತೀ ಧರ್ಮದ ನಂಬಿಕೆ. ಧರ್ಮ, ಆಚರಣೆ, ಸಂಪ್ರದಾಯಗಳನ್ನು ಬದಿಗೊತ್ತಿ
ನೋಡಿದರೆ ಇಂತಹ ಘಟನೆಗಳನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತದೆ. ಇಂತಹ ಸಣ್ಣ ಘಟನೆಯನ್ನು ಬಿಜೆಪಿ ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಮತ ಬುಟ್ಟಿ ತುಂಬಿಸಿಕೊಳ್ಳುವ ತನ್ನ ಚಾಳಿಯನ್ನು ಬಿಜೆಪಿ ಮುಂದುವರಿಸಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೋಲಿಸ್ ಅಧಿಕಾರಿಗಳ ಈ ನಡೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಧಿಕಾರಿಗಳ ಈ ನಡೆಯ ಕುರಿತು ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ , ಗೃಹ ಮಂತ್ರಿ, ಹಾಗೂ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದು, ಅನಗತ್ಯ ಗೊಂದಲ ಸೃಷ್ಟಿಸಿದ ಪೋಲಿಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ. ಮತ್ತು ಸ್ವಯಂ ಪ್ರೇರಿತ ಪ್ರಕರಣ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದೇನೆ ಎಂದು ಇನಾಯತ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.