Published
7 months agoon
By
Akkare Newsಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿನ ಉದ್ದಿಮೆದಾರರು ತಮ್ಮ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದಿದ್ದಲ್ಲಿ ಅಂಥವರ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸುವುದಾಗಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ‘ಸರ್ಕಾರದ ಭಾಷಾ ನೀತಿಯಂತೆ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರಗಳ ಉದ್ದಿಮೆಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೇಲ್‌ಗಳು ಮುಂತಾದವುಗಳು ತಮ್ಮ ನಾಮಫಲಕಗಳ ಮೇಲ್ಬಾಗದಲ್ಲಿ ಕನ್ನಡ ಭಾಷೆಯನ್ನು 60% ಪ್ರದರ್ಶಿಸುವುದು ಕಡ್ಡಾಯವಾಗಿರುತ್ತದೆ.
ಅದರಂತೆ ಪಾಲಿಕೆ ವ್ಯಾಪ್ತಿಯ ಉದ್ದಿಮೆದಾರರಿಗೆ ತಮ್ಮ ಉದ್ದಿಮೆ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನದಲ್ಲಿ ಶೇ. 60% ರಷ್ಟು ಪ್ರದರ್ಶಸುವ ನಿಬಂಧನೆಯನ್ನು ವಿಧಿಸಿ ಉದ್ದಿ ಪರವಾನಿಗೆಯನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ದಿಮೆ ಪರವಾನಿಗೆ ನವೀಕರಣ ಅಥವಾ ಹೊಸದಾಗಿ ಮಂಜೂರಾತಿ ಸಮಯದಲ್ಲಿ ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಸಾಕಷ್ಟು ಉದ್ದಿಮೆದಾರರು ಸರ್ಕಾರದ ನೀತಿಯಂತೆ ಕನ್ನಡ ನಾಮಫಲಕವನ್ನು ಪ್ರದರ್ಶಿಸುತ್ತಿರುವುದು ಕಂಡುಬರುತ್ತಿದೆ.
ಇದರ ನಡುವೆ ಕೆಲವೊಂದು ಉದ್ದಿಮೆದಾರರು ಪಾಲಿಕೆಯ ಆದೇಶವನ್ನು ಉಲ್ಲಂಘಿಸಿ ಅಂಗ್ಲ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬರುತ್ತಿದ್ದು ಇನ್ನು ಮುಂದಿನ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು ತಮ್ಮ ಉದ್ದಿಮೆ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡವನ್ನು ಅಗ್ರಸ್ಥಾನದಲ್ಲಿ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ ಪಾಲಿಕೆಯಿಂದ ನೀಡಲಾಗಿರುವ ಉದ್ದಿಮೆ ಪರವಾನಿಗೆಯನ್ನು ಯಾವುದೇ ಮುನ್ಸೂಚನೆ ನೀಡದೆ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.