ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಇನ್ಮುಂದೆ 1 ಲೀ. ಜೊತೆಗೆ 50 ಎಂಎಲ್‌ ಹೆಚ್ಚುವರಿ ಹಾಲು; ₹2 ಏರಿಕೆ

Published

on

ಪೆಟ್ರೋಲ್, ಡಿಸೇಲ್, ತರಕಾರಿ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಗೆ ಕಂಗೆಟ್ಟಿರುವ ಜನರಿಗೆ ಇದೀಗ ಮತ್ತೊಂದು ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ. ರಾಜ್ಯದಲ್ಲಿ 1.ಲೀ ಹಾಲಿಗೆ ₹42 ಇದ್ದು, ಇದೀಗ 1ಲೀ. ಜತೆಗೆ 50 ಎಂಎಲ್‌ ಹೆಚ್ಚುವರಿ ಹಾಲು ನೀಡಲು ಕೆಎಂಎಫ್‌ ಮುಂದಾಗಿದೆ. ಈ ಹಿನ್ನೆಲೆ, ₹2 ಏರಿಕೆಯಾಗಲಿದ್ದು, ₹44 ಆಗಲಿದೆ.

 

ಕಳೆದ ಆಗಸ್ಟ್‌ನಲ್ಲಿ ನಂದಿನಿ ಹಾಲು ಹಾಗೂ ಮೊಸರಿನ ದರ ಸೇರಿದಂತೆ ಇನ್ನಿತರ ಉತ್ಪನ್ನಗಳ ದರವನ್ನು ಏರಿಸಲಾಗಿತ್ತು. ಇದು ಜನಸಾಮಾನ್ಯರ ಜೇಬಿಗೆ ಹೊರೆಯಾಗಿ ಪರಿಣಮಿಸಿತ್ತು. ಇದೀಗ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡಿದೆ.

 

ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ (ಕೆಎಂಎಫ್‌) ಮಹತ್ವದ ನಿರ್ಧಾರವನ್ನು ಜೂನ್ 25ರಂದು ಪ್ರಕಟಿಸಿದೆ. ಕೆಎಂಎಫ್ ಮುಖ್ಯ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು.

ಈ ಬಗ್ಗೆ ಮಾತನಾಡಿದ ಕೆಎಂಎಫ್‌ ಅಧ್ಯಕ್ಷ ಭಿಮನಾಯ್ಕ್‌, “ಈಗ ನೀಡುತ್ತಿರುವ 1 ಲೀ. ಹಾಲಿನ ಜತೆಗೆ ಇನ್ನು ಹೆಚ್ಚುವರಿಯಾಗಿ 50 ಎಂಎಲ್‌ ಹೆಚ್ಚುವರಿ ಹಾಲು ನೀಡುತ್ತೇವೆ. ಅದಕ್ಕೆ ಹೆಚ್ಚುವರಿಯಾಗಿ ₹2 ಏರಿಕೆ ಮಾಡಿದ್ದೇವೆ. ಈ ಹಿಂದೆ 1 ಲೀಟರ್ ಹಾಲಿನ ದರ ₹42 ಇತ್ತು. ಇದೀಗ 1ಲೀ. ಜತೆಗೆ 50 ಎಂಎಲ್‌ ಹಾಲು ನೀಡುತ್ತೇವೆ. ಹಾಗಾಗಿ, ₹44 ಆಗಿದೆ” ಎಂದರು.

“ರೈತರ ಹಿತದೃಷ್ಟಿಯಿಂದ ಹಾಗೂ ಎಲ್ಲ ಒಕ್ಕೂಟದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೇ, ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಈಗ ಏನೇ ಹೆಚ್ಚುವರಿ ಹಣ ನಿಗದಿ ಮಾಡಿದರೂ ಕೂಡ ಅದು ರೈತರಿಗೆ ಸೇರುತ್ತದೆ” ಎಂದರು.

“ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ. ಸದ್ಯ 98 ಲಕ್ಷ 17ಸಾವಿರ ಲೀ. ಹಾಲು ಸಂಗ್ರಹ ಆಗುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ. ಇದು ದಾಖಲೆ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಲೀ. ಪೌಡರ್‌ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗುತ್ತಿದೆ. 27 ಲಕ್ಷ ಹಾಲು ಉತ್ಪಾದಕರು ಗ್ರಾಹಕರಿಗೆ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದ ಹಾಗೆ. ಪ್ರತಿ ಲೀಟರ್‌ ಪ್ಯಾಕೆಟ್‌ನಲ್ಲಿ 50 ಮಿಲೀ ಹಾಲನ್ನು ಹೆಚ್ಚಿಗೆ ನೀಡಲಾಗುವುದು. ಇದರಿಂದ ನಂದಿನಿ ಹಾಲಿನ ಬೆಲೆಯೇರಿಕೆಯ ಬಿಸಿ ಜನರಿಗೆ ತಟ್ಟುವುದಿಲ್ಲ” ಎಂದಿದ್ದಾರೆ.

“ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಾಗಿದೆ. ಕರ್ನಾಟಕದಲ್ಲಿ ನಂದಿನಿ ಹಾಲು ₹44, ಕೇರಳದಲ್ಲಿ ಮಿಲ್ಮಾ ₹52, ದೆಹಲಿ ಮದರ್ ಡೇರಿ ₹54, ಗುಜರಾತ್ ಅಮುಲ್ ₹56, ಮಹಾರಾಷ್ಟ್ರ ಅಮುಲ್ ₹56, ಆಂಧ್ರ ಪ್ರದೇಶ್ ವಿಜಯ ₹58 ಇದೆ. ಹಾಲಿಗೆ ಮಾತ್ರ ಬೆಲೆ ಏರಿಕೆ ಆಗಲಿದ್ದು, ಮೊಸರು, ತುಪ್ಪ, ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ನೀಲಿ ಪ್ಯಾಕೆಟ್ ಹಾಲು ₹42 ರಿಂದ ₹44, ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) ₹43 ರಿಂದ ₹45, ಸಮೃದ್ದಿ ಹಾಲು ₹51 ರಿಂದ ₹53, ಶುಭಂ (ಟೋನ್ಡ್ ಹಾಲು) ₹49 ರಿಂದ ₹51, ಸಂತೃಪ್ತಿ ಹಾಲು ₹55 ರಿಂದ ₹57, ಶುಭಂ ಗೋಲ್ಡ್ ಹಾಲು ₹49 ರಿಂದ ₹51, ಶುಭಂ ಡಬಲ್ ಟೋನ್ಡ್ ಹಾಲು ₹41 ರಿಂದ ₹43ಗೆ ಏರಿಕೆ ಆಗಲಿದೆ.

ಕೆಎಂಎಫ್​ ಎಂಡಿ ಎಂಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು ಸಹ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version