Published
6 months agoon
By
Akkare News
ದಕ್ಷಿಣ ಕನ್ನಡ, ಜು.09: ಕಡಲನಗರಿ ಮಂಗಳೂರನ್ನು(Mangalore) ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್ನ್ನು ಕೃತ್ಯ ನಡೆದ ಐದೇ ಗಂಟೆಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದು(ಮಂಗಳವಾರ) ನಗರದ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ಮಧ್ಯರಾತ್ರಿ ವೃದ್ಧ ದಂಪತಿಗಳಿದ್ದ ಮನೆಯ ಕಿಟಕಿ ಸರಳು ಮುರಿದು ನುಗ್ಗಿ, ದಂಪತಿಯಾದ ವಿಕ್ಟರ್ ಮೆಂಡೋನ್ಸಾ(71) ಹಾಗೂ ಪ್ಯಾಟ್ರಿಷಾ ಮೆಂಡೋನ್ಸಾ(60) ಅವರ ಮೇಲೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು. ಇದೀಗ ಆರೋಪಿಗಳಾದ ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಎಂಬ ನಾಲ್ವರನ್ನು ಅರೆಸ್ಟ್ ಮಾಡಿದ್ದು, ಇವರು ಮಧ್ಯಪ್ರದೇಶದವರು ಎಂಬುದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಎಂದಿನಂತೆ ವಿಕ್ಟರ್ ಮೆಂಡೋನ್ಸಾ ಹಾಗೂ ಪ್ಯಾಟ್ರಿಷಾ ಮೆಂಡೋನ್ಸಾ ದಂಪತಿ ಊಟ ಮುಗಿಸಿ ತಮ್ಮ ಮನೆಯಲ್ಲಿ ಮಲಗಿದ್ದರು. ಆದ್ರೆ, ಮಧ್ಯರಾತ್ರಿ 1.49ಕ್ಕೆ ನಾಲ್ವರು ದರೋಡೆಕೋರರ ಗ್ಯಾಂಗ್ ಇವರ ಮನೆಗೆ ಎಂಟ್ರಿಯಾಗಿದೆ. ಮನೆಯ ಇನ್ನೊಂದು ರೂಂನ ಕಿಟಕಿಯ ಸರಳು ಮುರಿದು ಒಳನುಗ್ಗಿದ್ದ ಈ ಗ್ಯಾಂಗ್, ನೇರವಾಗಿ ದಂಪತಿ ಮಲಗಿದ್ದ ರೂಂಗೆ ಬಂದಿದೆ. ದಂಪತಿ ಎಚ್ಚರವಾಗುತ್ತಿದ್ದಂತೆ ರಾಡ್‌ನಲ್ಲಿ ವಿಕ್ಟರ್ ಮೆಂಡೋನ್ಸಾ ಕಾಲಿಗೆ ಹಲ್ಲೆ ನಡೆಸಿದ್ದಾರೆ. ಬಳಿಕ ರಾಡ್ ಹಿಡಿದುಕೊಂಡು ನಗದು ಹಣ ನೀಡುವಂತೆ ಬೆದರಿಸಿದ್ದಾರೆ. ನಗದು ಹಣ ನಮ್ಮ ಬಳಿ ಇಲ್ಲ ಎಂದಾಗ ಕಪಾಟು, ಬೀರು ತಡಕಾಡಿದ್ದಾರೆ. ಈ ಸಂದರ್ಭ ಚಿನ್ನಾಭರಣ ಸಿಕ್ಕಿದ್ದು, ಜೊತೆಗೆ ಹೊಸ ಮೊಬೈಲ್ ಫೋನ್, ವಾಚ್‌ನ್ನು ದೋಚಿದ್ದಾರೆ. ಸುಮಾರು ಮೂರು ಗಂಟೆ ಮನೆಯೊಳಗಿದ್ದ ದರೋಡೆಕೋರರು, ಹೋಗುವಾಗ ದಂಪತಿ ಬಳಿ ಕಾರಿನ ಕೀ ಕೇಳಿ, ಮನೆಯಲ್ಲಿದ್ದ ಕಾರಿನಲ್ಲೇ ಎಸ್ಕೇಪ್ ಆಗಿದ್ದಾರೆ. ಬಳಿಕ ಪರಾರಿಯಾಗಲು ಬಳಸಿದ ಕಾರನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಗಡಿಭಾಗ ಹೆಜಮಾಡಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು.
ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ವಿದೇಶದಲ್ಲಿದ್ದಾರೆ. ಹೀಗಾಗಿ ಈ ಘಟನೆ ಬಳಿಕ ಸುಧಾರಿಸಿಕೊಂಡ ವಿಕ್ಟರ್ ಮೆಂಡೋನ್ಸಾ ಹಾಗೂ ಪತ್ನಿ ಪ್ಯಾಟ್ರಿಷಾ ಮೆಂಡೋನ್ಸಾ ನೆರೆಯ ಮನೆಗೆ ಹೋಗಿ ದರೋಡೆ ವಿಚಾರ ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಹಲ್ಲೆಯಿಂದ ಗಾಯಗೊಂಡ ವಿಕ್ಟರ್ ಮೆಂಡೋನ್ಸಾ ಅವರವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.