Published
5 months agoon
By
Akkare Newsಕುಂಬ್ರದ ಕಾರ್ ಡೀಲರ್‌ಗೆ ಬಂತು ಹುಬ್ಬಳ್ಳಿಯಿಂದ ಚಿನ್ನದ ಕರೆ…! ಸ್ವಲ್ಪ ಯಾಮರಿದರೂ ಜೀವಕ್ಕೆ ಕುತ್ತು
ಪುತ್ತೂರು: ‘ ಮನೆ ಕಟ್ಟಲು ಪಾಯ ತೆಗೆಯುವಾಗ ನಮ್ಮ ತಾತ ಮತ್ತು ಅಜ್ಜಿಗೆ ಸುಮಾರು 6 ಕೆ.ಜಿ ಹಳೆಯ ಚಿನ್ನದ ನಾಣ್ಯಗಳು ಸಿಕ್ಕಿವೆ. ಅದನ್ನು ಅವರು ಮಾರಾಟ ಮಾಡಲು ನನ್ನ ಹತ್ರ ಹೇಳಿದ್ದಾರೆ. 1 ಕೆ.ಜಿ ಚಿನ್ನಕ್ಕೆ 30 ಲಕ್ಷಕ್ಕೆ ಅಂದರೆ ಸರಿ ಅರ್ಧ ಬೆಲೆಗೆ ನಾನು ನಿನಗೆ ತೆಗೆಸಿಕೊಡುತ್ತೇನೆ. ನೀನು ಇಲ್ಲಿಗೆ ಬಂದು ಚಿನ್ನದ ನಾಣ್ಯಗಳನ್ನು ಪರಿಶೀಲನೆ ಮಾಡಿ ನಿನ್ನೂರಿಗೆ ತೆಗೆದುಕೊಂಡು ಹೋಗಿ ಅದನ್ನು ಪರೀಕ್ಷಿಸಿದ ಬಳಿಕವೇ ಡೀಲ್ ಮಾತನಾಡುವ, ಮೊದಲು ನೀನು ಕಾರು ಮಾಡಿಕೊಂಡು ನಮ್ಮೂರಿಗೆ ಬಾ..’ ಎಂಬ ಫೋನ್ ಸಂದೇಶವೊಂದು ಹುಬ್ಬಳ್ಳಿಯಿಂದ ಕುಂಬ್ರದ ಕಾರ್ ಡೀಲರ್ ಎಂ.ಎಂ ಸರ್ಫುದ್ದೀನ್ ಎಂಬವರಿಗೆ ಬಂದಿದ್ದು ಅಚ್ಚ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿ ನಾನು ನಿಮ್ಮ ಸೆಕೆಂಡ್ ಹ್ಯಾಂಡ್ ವೆಹಿಕಲ್ ಶೋರೂಮ್‌ನಿಂದ ಬೈಕ್ ಖರೀದಿಸಿದ ಗ್ರಾಹಕ ಎಂದೇ ಪರಿಚಯಿಸಿ ಮಾತನಾಡಿದ ಘಟನೆ ನಡೆದಿದೆ.
ಇತ್ತೀಚೆಗೆ ಸರ್ಫುದ್ದೀನ್ ಎಂಬವರಿಗೆ ಹುಬ್ಬಳ್ಳಿಯಿಂದ ಒಬ್ಬ ವ್ಯಕ್ತಿ ಕರೆ ಮಾಡಿ, ನಾನು ನಿಮ್ಮ ಬೈಕ್ ಶೋರೂಮ್‌ನಿಂದ ಒಂದು ಬೈಕ್ ಖರೀದಿಸಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಮ್ಮೂರಿನಲ್ಲಿ ಒಬ್ಬರು ತಾತ ಮತ್ತು ಅಜ್ಜಿಯವರು ಮನೆ ನಿರ್ಮಾಣಕ್ಕೆ ಪಾಯ ತೆಗೆಸುವಾಗ ಹಳೆಯ ಕಾಲದ ಚಿನ್ನದ ನಾಣ್ಯಗಳಿರುವ ನಿಧಿ ಸಿಕ್ಕಿದೆ. ಅದನ್ನು ಅವರು ದೂರದ ಯಾರಿಗಾದರೂ ಮಾರಾಟ ಮಾಡಲು ತಿಳಿಸಿದ್ದಾರೆ. ಇಲ್ಲದಿದ್ದರೆ ಅದು ಸರಕಾರದ ಪಾಲಾಗುತ್ತದೆ ಅಲ್ವ, ಅದಕ್ಕಾಗಿ ನಿಮಗೆ ಕರೆ ಮಾಡಿದ್ದೇನೆ. ನಿಮಗೆ ಚಿನ್ನದ ನಾಣ್ಯಗಳು ಬೇಕಿದ್ದರೆ ಸರಿ ಅರ್ಧ ಬೆಲೆಗೆ ನಾನು ತೆಗೆಸಿಕೊಡುತ್ತೇನೆ. ನೀವು ಕಾರು ಮಾಡಿಕೊಂಡು ಶಿವಮೊಗ್ಗಕ್ಕೆ ಬನ್ನಿ ಅಲ್ಲಿಂದ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ನಿಮಗೆ ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ.ಅದನ್ನು ಪರೀಕ್ಷಿಸಿ ಅದು ಅಸಲಿ ಚಿನ್ನವೇ ಎಂದು ತಿಳಿದುಕೊಂಡು ಬಳಿಕ ನಮಗೆ ಹಣ ಕೊಟ್ಟರೆ ಸಾಕು ಎಂಬಂತೆ ಮಾತನಾಡಿದ್ದಾನೆ.
ಇದಕ್ಕೆ ಎಂ.ಎಂ ಸರ್ಫುದ್ದೀನ್‌ರವರು ಆತನಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು ಇದು ಮೋಸ ಅಲ್ಲ ತಾನೆ ಎಂದು ಕೇಳಿದ್ದಾರೆ. ಅದಕ್ಕೆ ಆತ ಬಹಳಷ್ಟು ನಂಬಿಕೆ ಬರುವ ರೀತಿಯಲ್ಲಿ ಉತ್ತರಿಸಿ ನನ್ನ ಮಾತು ಅಂದ್ರೆ ಮಾತು, ನಾನು ಸುಳ್ಳು ಮೋಸ ಮಾಡಲ್ಲ, ನೀವು ಬನ್ನಿ ಬಂದು ನೋಡಿ ಮತ್ತೆ ಹಣದ ಮಾತುಕತೆ ನಡೆಸುವ ಅಂತಲೇ ಹೇಳಿದ್ದಾನೆ.
ಸ್ವಲ್ಪ ಯಾಮರಿದರೂ ಜೀವಕ್ಕೆ ಕುತ್ತು..! ಎಂ.ಎಂ.ಸರ್ಫುದ್ದೀನ್‌ರವರು ಕರೆ ಮಾಡಿದಾತನಲ್ಲಿ ನೀವು ನಮ್ಮ ಶೋರೂಮ್‌ನಿಂದ ಯಾವ ಬೈಕ್ ಖರೀದಿಸಿದ್ದು ಅದರ ಡಾಕ್ಯುಮೆಂಟ್ ಎಲ್ಲಾ ಸರಿ ಇದೆ ತಾನೆ, ಏನಾದರೂ ಸಮಸ್ಯೆ ಆಗಿದೆಯಾ ಎಂದು ಕೇಳಿದ್ದಕ್ಕೆ ಆತ ತಬ್ಬಿಬ್ಬುಗೊಂಡಿದ್ದು ಬೈಕ್‌ನ ಹೆಸರು ನೆನಪಿಲ್ಲ, ನಾನು ನನ್ನ ಫ್ರೆಂಡ್ಸ್‌ಗೆ ಖರೀದಿಸಿ ಕೊಟ್ಟಿದ್ದು ಎಂದೆಲ್ಲ ಹೇಳಿದ್ದಾನೆ. ಕರೆ ಮಾಡಿದಾತ ಗ್ರಾಹಕನಂತೆ ಪರಿಚಯಿಸಿಕೊಂಡು ಮೋಸ ಮಾಡಲು ನೋಡಿದ್ದಾನೆ. ಇಲ್ಲಿ ಸ್ವಲ್ಪ ಯಾಮರಿದರೂ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಚಿನ್ನದ ಆಸೆಗೆ ಕಾರು ಮಾಡಿಕೊಂಡು ಶಿವಮೊಗ್ಗಕ್ಕೆ ಹೋದರೆ ಮುಂದೆ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
ಆಡಿಯೋ ಲೀಕ್ ಮಾಡುವ ಮೂಲಕ ಜಾಗೃತಿ ವಂಚಕ ಮಾಡಿದ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಎಂ.ಎಂ.ಸರ್ಫುದ್ದೀನ್‌ರವರು ಅದನ್ನು ತನ್ನ ಎಲ್ಲಾ ವಾಟ್ಸಫ್ ಗ್ರೂಪ್‌ಗಳಿಗೆ ಶೇರ್ ಮಾಡಿದ್ದಾರೆ. ವಾಯ್ಸ್ ಲೀಕ್ ಮಾಡಬಾರದು ಎಂಬ ಬೆದರಿಕೆ ಬಂದಿದ್ದರೂ ಅದನ್ನು ಕ್ಯಾರ್ ಮಾಡದೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಮೋಸದ ಕರೆಗಳಿಗೆ ಯಾರೂ ಬಲಿಯಾಗಬಾರದು ಎಂಬ ನಿಟ್ಟಿನಲ್ಲಿ ವಂಚಕ ಮಾಡಿರುವ ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ತೆರಳಿ ದೂರು ಕೂಡ ನೀಡಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಘಟನೆಯನ್ನು ನೆನಪು ಮಾಡುತ್ತದೆನಿಧಿ ಶೋಧದ ವೇಳೆ ಚಿನ್ನಾಭರಣಗಳು ಸಿಕ್ಕಿವೆ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂಬ ಆಸೆ ತೋರಿಸಿ ಬೆಳ್ತಂಗಡಿಯ ಮೂರು ಮಂದಿಯನ್ನು ತುಮಕೂರಿಗೆ ಕರೆಸಿಕೊಂಡ ವಂಚಕರು ಅವರನ್ನು ಕೊಂದು ಕಾರು ಸಮೇತ ಸುಟ್ಟು ಹಾಕಿರುವ ಘಟನೆ ಇತ್ತೀಚೆಗೆ ನಡೆದಿದೆ. ಇದರಲ್ಲೂ ಕೂಡ ನಿಧಿಯ ಆಸೆಗೆ ಇವರು ಹಣ ಸಮೇತ ತುಮಕೂರಿಗೆ ಬಂದಿದ್ದರು. ಆದರೆ ವಂಚಕರು ಅವರನ್ನು ಕೊಂದು ಹಣವನ್ನು ಲಪಟಾಯಿಸಿದ್ದಾರೆ. ಎಂ.ಎಂ.ಸರ್ಫುದ್ದೀನ್‌ರವರಿಗೆ ಬಂದ ಕರೆಯೂ ಕೂಡ ನಮಗೆ ನಿಧಿ ಸಿಕ್ಕಿದೆ ಅದರಲ್ಲಿರುವ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುತ್ತೇವೆ. ನೀವು ಕಾರು ಮಾಡಿಕೊಂಡು ಶಿವಮೊಗ್ಗಕ್ಕೆ ಬನ್ನಿ ಎಂಬುದಾಗಿತ್ತು. ಆದರೆ ಸರ್ಫುದ್ದೀನ್‌ರವರು ತಮ್ಮ ಸಮಯಪ್ರಜ್ಞೆ ಹಾಗೂ ಜಾಣತನದಿಂದ ವಂಚಕನ ವಂಚನೆಯನ್ನುಬಯಲಿಗೇಳೆಯುವಲ್ಲಿ ಸಫಲರಾಗಿದ್ದಾರೆ.