Published
5 months agoon
By
Akkare Newsಮಂಗಳೂರು: ರಾಜ್ಯಾದ್ಯಂತ ಇನ್ನೂ ಒಂದು ವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಎಲ್ಲಾ ಜಿಲ್ಲೆಗಳಿಗೆ ಭಾನುವಾರ ಆರೆಂಜ್ ಅಲರ್ಟ್ ಹಾಗೂ ಜುಲೈ 15 ಮತ್ತು 16ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ , ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಜುಲೈ 14ರಂದು ಆರೆಂಜ್ ಅಲರ್ಟ್ ಹಾಗೂ ಚಾಮರಾಜನಗರ, ಹಾಸನ ಜಿಲ್ಲೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಜುಲೈ 15ರಂದು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ರೆಡ್ ಹಾಗೂ ಕೊಡಗು, ಹಾಸನ ಜಿಲ್ಲೆಗೆ ಆರೆಂಜ್ ಹಾಗೂ ಮೈಸೂರು ಜಿಲ್ಲೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮುಂಗಾರು ಮಳೆ ಮತ್ತಷ್ಟು ಚುರುಕಾಗಿದೆ. ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲೂ ಉತ್ತಮ ಮಳೆಯಾಗಿದ್ದು, ಇನ್ನೆರಡು ದಿನಗಳ ಕಾಲ ಇದು ಜಾಸ್ತಿಯಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ 87 ಮಿ.ಮೀ. ಮಳೆ ಸುರಿದಿದೆ.
ಮಂಗಳೂರಿನ ಬಜಾಲ್ ಜಲ್ಲಿಗುಡ್ಡೆಯ ಸಮೀಪ ಗುಡ್ಡ ಕುಸಿದು ಬಿದ್ದರೆ, ನಗರದ ನಾನಾ ರಸ್ತೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆಯಾಯಿತು. ಪಂಪ್‌ವೆಲ್ ಮೇಲ್ಸೇತುವೆಯ ಕೆಳಭಾಗದಲ್ಲಿ ಬಜಾಲ್ ಅಂಡರ್ ಪಾಸ್, ಪಡೀಲ್ ಭಾಗದಲ್ಲಿ ನೀರು ಸರಾಗವಾಗಿ ಸಾಗದೇ ಮಳೆ ನೀರು ರಸ್ತೆಯಲ್ಲೇ ಸಾಗಿತು.
ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಮೂಡುಬಿದಿರೆಯಲ್ಲಿ 100.3 ಮಿ.ಮೀ., ಬೆಳ್ತಂಗಡಿಯಲ್ಲಿ 88.2 ಮಿ.ಮೀ, ಬಂಟ್ವಾಳದಲ್ಲಿ 95.8 ಮಿ.ಮೀ, ಪುತ್ತೂರಿನಲ್ಲಿ 81.5 ಮಿ.ಮೀ., ಮಂಗಳೂರಿನಲ್ಲಿ 78.8 ಮಿ.ಮೀ., ಸುಳ್ಯದಲ್ಲಿ 87.7 ಮಿ.ಮೀ., ಕಡಬದಲ್ಲಿ 79.2 ಮಿ.ಮೀ., ಮೂಲ್ಕಿಯಲ್ಲಿ 98.2 ಮಿ.ಮೀ. ಹಾಗೂ ಉಳ್ಳಾಲದಲ್ಲಿ 72.9 ಮಿ.ಮೀ. ಮಳೆಯಾಗಿದೆ.
ಇನ್ನೂ ನಾಲ್ಕೈದು ದಿನ ಉತ್ತರ ಕನ್ನಡ ಜಲ್ಲೆಯಲ್ಲಿ ಮಳೆ ಆರ್ಭಟಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.14 ರಂದು ಸರಾಸರಿ 100 ಮಿ.ಮೀ. ಮೇಲ್ಪಟ್ಟು ಮಳೆಯಾಗಲಿದೆ ಎಂಬ ಅಂದಾಜಿದೆ. ಹಾಗಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.15, 16ರಂದು ದಿನಕ್ಕೆ 200 ಮಿ.ಮೀ. ಗೂ ಅಧಿಕ ಮಳೆಯಾಗುವ ಸಾಧ್ಯತೆ ಎಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು. 17ಕ್ಕೆ ಆರೆಂಜ್ ಅಲರ್ಟ್ ಇದೆ.
ಹೀಗೆ ಮುಂದಿನ ವಾರ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಮನ್ಸೂಚನೆ ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಹಿನ್ನಡೆಯಾಗಿದೆ. ಸಮುದ್ರದಲ್ಲಿ ತೂಫಾನ್ ಆಗುತ್ತಿದೆ. ಕೃಷಿ ಚಟುವಟಿಕೆಯೂ ಅತಿಯಾದ ಮಳೆಯಿಂದ ನಿಧಾನವಾಗಿದೆ. ಕರಾವಳಿ ಭಾಗದಲ್ಲಿ ಇನ್ನೂ ಕೃಷಿ ಚಟುವಟಿಕೆ ಚುರುಕುಗೊಂಡಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಶೇ.50 ರಷ್ಟು ಮಾತ್ರ ಬಿತ್ತನೆ ಆಗಿದೆ ಎಂದು ಅಂದಾಜಿಸಲಾಗಿದೆ.