Published
5 months agoon
By
Akkare Newsಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ.
ಕೇರಳ ಮಾಧ್ಯಮಗಳ ಕವರೇಜ್
ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ
.