ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಪಘಾತ

ಶಿರೂರು ಗುಡ್ಡ ಕುಸಿತ | 10ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ; ಪತ್ತೆಯಾದ ಟ್ರಕ್ ಮೇಲೆತ್ತಲು ಸಕಲ ಸಿದ್ಧತೆ

Published

on

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಮೊಬೈಲ್ ಸ್ವಿಚ್ ಆನ್ ಆಗಿರುವ ಲಾರಿ ಚಾಲಕ ಅರ್ಜುನ ಸೇರಿದಂತೆ ಇತರರಿಗಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆಯನ್ನು 10ನೇ ದಿನವೂ ಮುಂದುವರಿಸಲಾಗಿದೆ.

 

ಈಗಾಗಲೇ ನದಿಯ ಒಳಗಡೆ ಪತ್ತೆಯಾಗಿರುವ ಟ್ರಕ್ ಅನ್ನು ಮೇಲೆತ್ತಲು ಸೇನೆಯ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ. ಮಲಯಾಳಿಯೂ ಆಗಿರುವ ಆರ್. ಮೇಜರ್ ಜನರಲ್ ಎಂ ಇಂದ್ರಬಾಲನ್ ಅವರ ನೇತೃತ್ವದಲ್ಲಿ ಇಂದಿನ ಕಾರ್ಯಾಚರಣೆಯನ್ನು ಗುರುವಾರ ಬೆಳಗ್ಗೆ 7.30ಕ್ಕೆ ಆರಂಭಿಸಲಾಗಿದೆ.

ಒಂದು ವೇಳೆ ನಾಪತ್ತೆಯಾಗಿರುವ  ಚಾಲಕ ಅರ್ಜುನ್ ಸೇರಿದಂತೆ ಇತರೆ ಮೂವರ ಶವ ಇಂದು ದೊರೆತಲ್ಲಿ, ಇಂದಿಗೆ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

 

ಶಿರೂರು ಭೂಕುಸಿತದಲ್ಲಿ ಸಿಲುಕಿರುವವರ ಹುಡುಕಾಟಕ್ಕೆ ಬೂಮ್ ಎಕ್ಸ್‌ಕಾವೇಟರ್ ಅಥವಾ ಬೂಮ್ ಪೊಕ್ಲೇನ್ ಯಂತ್ರವನ್ನು ಬೆಳಗಾವಿಯಿಂದ ಬುಧವಾರ ತರಿಸಲಾಗಿತ್ತು. ಬೂಮ್ ಪೊಕ್ಲೇನ್ ಯಂತ್ರವು ಶಿರೂರಿಗೆ ತಂದ ದಿನವೇ ನೀರಿನಲ್ಲಿ ಟ್ರಕ್ ಇರುವುದನ್ನು ಭಾರತೀಯ ವಾಯುಸೇನೆಯು ಸೋಲಾರ್ ತಂತ್ರಾಜ್ಞಾನದ ಮೂಲಕ ಪತ್ತೆ ಹಚ್ಚಿತ್ತು. ಅಲ್ಲದೇ, ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿರುವ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಕೂಡ ಮಾಹಿತಿ ಹಂಚಿಕೊಂಡಿದ್ದರು.

 

ನೌಕಾಪಡೆಯ ಮುಳುಗು ತಜ್ಞರು ಲಾರಿ ಚಾಲಕ, ಕೇರಳದ ಕೋಝಿಕ್ಕೋಡ್‌ನ ಅರ್ಜುನ್ ಅವರನ್ನು ಹುಡುಕಲು ಗಂಗಾವಳಿ ನದಿಯ ಆಳಕ್ಕೆ ಧುಮುಕಲಿದ್ದಾರೆ. ಲಾರಿ ಎತ್ತಲು ನದಿಯಲ್ಲಿ ವಿಶೇಷ ಫ್ಲ್ಯಾಟ್‌ಫಾರಂ ಅನ್ನು ಅಳವಡಿಸಲು ನಿರ್ಧರಿಸಲಾಗಿದೆ. ಲಾರಿಯು ದಡದಿಂದ 30 ಮೀಟರ್ ದೂರದಲ್ಲಿ 15 ಅಡಿ ಆಳದಲ್ಲಿ ಪತ್ತೆಯಾಗಿತ್ತು.

 

ನದಿಯಲ್ಲಿ ಟ್ರಕ್ ತಲೆಕೆಳಗಾಗಿ ಬಿದ್ದಿರುವುದಾಗಿ ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇಂದು ತಪಾಸಣೆಗೆ ಅತ್ಯಾಧುನಿಕ ಡ್ರೋನ್‌ಗಳು ದೆಹಲಿಯಿಂದ ಶಿರೂರಿಗೆ ತಲುಪಿರುವುದಾಗಿ ಮಾಹಿತಿ ದೊರಕಿದೆ. ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಭಾರೀ ಗಾಳಿ ಮತ್ತು ಮಳೆ ಹಾಗೂ ಭೂಕುಸಿತದ ಆತಂಕದಿಂದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಭಾರೀ ಮಳೆಯಿಂದಾಗಿ ಶಿರೂರಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವರದಿಗಳ ಪುಕಾರ ಶಿರೂರಿನಲ್ಲಿ 20 ವರ್ಷಗಳಲ್ಲೇ ಸುರಿದ ಅತಿ ಹೆಚ್ಚು ಮಳೆ ಇದಾಗಿದೆ.

 

ಕಾರ್ಯಾಚರಣೆ ಹೇಗೆ?

k ಎಲ್ಲಿದೆ ಎಂಬುದು ದೃಢಪಟ್ಟಿರುವುದರಿಂದ 10ನೇ ದಿನದ ರಕ್ಷಣಾ ಕಾರ್ಯಾಚರಣೆ ನಿರ್ಣಾಯಕವಾಗಲಿದೆ. ಲಾರಿಯೊಳಗೆ ಅರ್ಜುನ್ ಇದ್ದಾನಾ ಎಂಬುದು ಮೊದಲ ಪರಿಶೀಲನೆಯಾಗಲಿದೆ. ಇದಕ್ಕಾಗಿ ನೌಕಾಪಡೆಯ ಮುಳುಗು ತಜ್ಞರು ಮೊದಲು ನೀರಿನೊಳಗೆ ಇಳಿದು, ಅರ್ಜುನ್ ಕ್ಯಾಬಿನ್‌ನಲ್ಲಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಾಗುವುದು. ಇದಾದ ಬಳಿಕ ಲಾರಿಯನ್ನು ಹೊರತರಲು ಪ್ರಯತ್ನಿಸಲಾಗುವುದು ಎಂದು ಆರ್. ಮೇಜರ್ ಜನರಲ್ ಎಂ ಇಂದ್ರಬಾಲನ್ ಮಾಹಿತಿ ನೀಡಿದ್ದಾರೆ.

 

ಹವಾಮಾನವು ಅನುಕೂಲಕರವಾಗಿದ್ದರೆ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು ಎಂದು ಅಂದಾಜಿಸಲಾಗಿದೆ. ಅತ್ಯಾಧುನಿಕ ಡ್ರೋನ್‌ಗಳು ಈಗಾಗಲೇ ತಲುಪಿದ್ದರೂ, ಅರ ಬ್ಯಾಟರಿಗಳು ಇನ್ನೂ ತಲುಪಿಲ್ಲ. ಇಂದು ದೆಹಲಿಯಿಂದ ರೈಲಿನ ಮೂಲಕ ತರಿಸಲಾಗುತ್ತಿದ್ದು, ಬೆಳಗ್ಗೆ 10ರ ಸುಮಾರಿಗೆ ಶಿರೂರಿನ ಘಟನಾ ಸ್ಥಳಕ್ಕೆ ತಲುಪಲಿದೆ ಎಂದು ವರದಿಯಾಗಿದೆ.

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ: ಕಾರಣ ಏನು?

ಅತ್ಯಾಧುನಿಕ ಡ್ರೋನ್‌ಗಳು ಇಂದು ಕಾರ್ಯಾಚರಣೆ ನಡೆಸಲಿರುವುದರಿಂದ ಅದರ ಫ್ರೀಕ್ವೆನ್ಸಿಗೆ ಯಾವುದೇ ತೊಂದರೆ ಉಂಟಾಗಬಾರದೆಂಬ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಯಾವುದೇ ಮಾಧ್ಯಮಗಳಿಗೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಬುಧವಾರ ಸಂಜೆಯೇ ಕೇರಳ, ಕರ್ನಾಟಕ ಸೇರಿದಂತೆ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ.

ಕಾರ್ಯಾಚರಣೆಯ ಪ್ರತಿಯೊಂದು ಮಾಹಿತಿಯನ್ನು ನೀಡಲು ಅಂಕೋಲಾ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಶಾಸಕ ಸತೀಶ್ ಸೈಲ್ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ, ಬೆಳಗ್ಗೆ 8 ಗಂಟೆಯ ನಂತರ ಯಾವುದೇ ಮಾಧ್ಯಮ ಪ್ರತಿನಿಧಿಗಳು ಕಾರ್ಯಾಚರಣೆಯ ಸ್ಥಳದಲ್ಲಿ ಇರಬಾರದು ಎಂಬ ಸೂಚನೆ ನೀಡಲಾಗಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version