Published
4 months agoon
By
Akkare News
ಕಡಬ: ಸುಳ್ಯ ತಾಲೂಕಿನಿಂದ ಕಡಬ ತಾಲೂಕನ್ನು ಸಂಪರ್ಕಿಸುವ ಪ್ರಮುಖ ಜಿಲ್ಲಾ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯ ಕಲ್ಲಂತಡ್ಕ ಬಳಿ ರಸ್ತೆಯಲ್ಲಿ ಮರಣಗುಂಡಿಗಳು ಸೃಷ್ಟಿಯಾಗಿದ್ದು ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.
ಕಡಬ-ಪಂಜ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಹೊಂಡ ಬಿದ್ದ ವ್ಯಾಪ್ತಿಯಲ್ಲಿ ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತಿದ್ದು ರಸ್ತೆ ಇಕ್ಕೆಳಗಳಲ್ಲಿ ಚರಂಡಿ ಸಮರ್ಪಕವಾಗಿ ಇಲ್ಲದೆ ಹಳ್ಳವಾಗಿ ಪರಿವರ್ತನೆಯಾಗಿದೆ.
ಕಡಬದಿಂದ ಓಂತ್ರಡ್ಕ ಎಂಬಲ್ಲಿ ವರೆಗೆ ಅಲ್ಲಲ್ಲಿ ಹೊಂಡಗಳೂ ನಿರ್ಮಾಣವಾಗಿದ್ದು ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಸ್ಥಿತಿ ಉಂಟಾಗಿದೆ.
ರಸ್ತೆ ಗುಂಡಿಗಳನ್ನು ಕನಿಷ್ಠ ಕ್ರಷರ್ ಹಾಕಿ ಮುಚ್ಚಿ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ಮಾಡಿ ಕೊಡಲಿ ಎಂಬುದು ಸ್ಥಳೀಯ ವಾಹನ ಸವಾರರ ಆಗ್ರಹವಾಗಿದೆ. ಕಡಬದಿಂದ ಪಂಜ, ನಿಂತಿಕಲ್, ಬೆಳ್ಳಾರೆ ಮೂಲಕ ಸುಳ್ಯಕ್ಕೆ ಹಲವು ಬಸ್ ಸಹಿತ ಇತರ ವಾಹನ ಗಳು ಸಂಚರಿಸುತ್ತಿವೆ. ರಸ್ತೆ ಗುಂಡಿಯಿಂದ ವಾಹನ ಚಲಾಯಿಸಲು ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ಎದುರಾಗಿದೆ.
ಈ ಬಗ್ಗೆ ಕಡಬ ಟೈಮ್ ಜೊತೆ ಮಾತನಾಡಿದ ಸುಳ್ಯ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋಪಾಲ್ ಅವರು, ರಸ್ತೆಯಲ್ಲಿ ನಿರ್ಮಾಣದ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.ಕಡಬದಿಂದ ಪಂಜವನ್ನು ಸಂಪರ್ಕಿಸುವ 9.7 ಕಿ.ಮೀ. ಉದ್ದದ ರಸ್ತೆಯಲ್ಲಿ ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ಶಾಲೆಯ ತನಕ (2.4 ಕಿ.ಮೀ) ರಸ್ತೆ ಹಾಗೂ ಬಾಕಿ ಉಳಿದಿರುವ 7.2 ಕಿ.ಮೀ. ಉದ್ದದ ರಸ್ತೆಯನ್ನು ಅಂದಿನ ಸಚಿವರಾಗಿದ್ದ ಎಸ್ ಅಂಗಾರ ಅವರ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.