ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪುತ್ತೂರು : ಪುತ್ತೂರಿನಲ್ಲಿ ತಯಾರಾಗುವ ಈ ಮಣ್ಣಿನ ಗಣಪನ ವಿಗ್ರಹಕ್ಕಿದೆ ಭಾರೀ ಬೇಡಿಕೆ

Published

on

ಪುತ್ತೂರು:(ಸೆ.6) ಇನ್ನೇನು ಮೋದಕ ಪ್ರಿಯ ಗಣಪನ ಚತುರ್ಥಿಗೆ ದಿನಗಣನೆ ಆರಂಭಗೊಂಡಿದ್ದು, ಎಲ್ಲಾ ಕಡೆಗಳಲ್ಲೂ ಗಣೇಶನ ವಿಗ್ರಹದ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ. ಅತೀ ಕಡಿಮೆ ದಿನದಲ್ಲಿ ಹೆಚ್ಚಿನ ಲಾಭ ಗಳಿಸಬೇಕು ಎನ್ನುವ ಉದ್ಧೇಶದಿಂದ ಇಂದು ಪ್ಯಾಸ್ಟರ್ ಅಫ್ ಪ್ಯಾರೀಸ್ ಸೇರಿದಂತೆ ವಿವಿಧ ರಾಸಾಯನಿಕಗಳನ್ನು ಬಳಸಿ ಗಣೇಶನ ವಿಗ್ರಹವನ್ನು ತಯಾರಿಸಲಾಗುತ್ತಿದ್ದು, ಇದು ಪರಿಸರದ ಮೇಲೆ ಭಾರೀ ದುಷ್ಪರಿಣಾಮವನ್ನೇ ಬೀರುತ್ತಿದೆ.

ಆದರೆ ಸಾಂಪ್ರದಾಯಿಕ ರೀತಿಯಲ್ಲಿ ಮಣ್ಣನ್ನೇ ಬಳಸಿ ಗಣೇಶನ ವಿಗ್ರಹವನ್ನು ತಯಾರಿಸುವವರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದಿಗೂ ಇದ್ದು , ಇವರು ತಯಾರಿಸಿದ ವಿಗ್ರಹಗಳು ಪರಿಸರ ಪ್ರೇಮಿ ವಿಗ್ರಹವಾಗಿ ಖ್ಯಾತಿವೆತ್ತಿದೆ.

 

ಮಣ್ಣಿನಿಂದಲೇ ಗಣೇಶನ ವಿಗ್ರಹ ತಯಾರಿಸಿ ಅದನ್ನು ವಿಸರ್ಜನೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ಬಂದಂತಹ ಪದ್ದತಿಯಾಗಿದ್ದು, ಇಂದು ಕಾಲಕ್ಕೆ ತಕ್ಕಂತೆ ವಿಗ್ರಹ ತಯಾರಿಸುವ ವಿಧಾನವೂ ಬದಲಾಗಿದೆ. ಹಿಂದೆ ಗಣೇಶ ಚತುರ್ಥಿ ಸಮೀಪಿಸಲು ತಿಂಗಳು ಇರುವಾಗಲೇ ವಿಗ್ರಹ ತಯಾರಿಸಲು ಬೇಕಾದ ಮಣ್ಣನ್ನು ಶೇಖರಿಸಿ ಹದಮಾಡಿ ವಿಗ್ರಹ ತಯಾರಿಸಲು ಆರಂಭ ಮಾಡುತ್ತಿದ್ದರು.

ಆದರೆ ಇಂದು ಗಣೇಶ ಚತುರ್ದಶಿಗೆ ಮುನ್ನಾದಿನವೇ ಪ್ಲಾಸ್ಟರ್ ಅಫ್ ಪ್ಯಾರೀಸ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಸಿ ವಿಗ್ರಹವನ್ನು ತಯಾರಿಸಲಾಗುತ್ತಿದ್ದು, ಇವುಗಳು ಪರಿಸರಕ್ಕೆ ಮಾರಕವಾಗಿಯೂ ಬದಲಾಗುತ್ತಿದೆ. ಇಂಥಹ ವಿಗ್ರಹಗಳನ್ನು ಸಮುದ್ರ ಅಥವಾ ನದಿಗಳಲ್ಲಿ ವಿಸರ್ಜನೆ ಮಾಡುವುದರಿಂದ ಅವುಗಳು ನೀರಿನಲ್ಲಿ ವಿಲೀನಗೊಂಡು ನೀರನ್ನು ಮಾಲಿನ್ಯಗೊಳಿಸುವ
ಸಾಧ್ಯತೆಗಳು ಹೆಚ್ಚಾಗಿವೆ.

ಆದರೆ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಮಣ್ಣನ್ನೇ ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಕೇವಲ ಮಣ್ಣಲ್ಲದೆ ವಿಗ್ರಹಗಳಿಗೆ ಹಚ್ಚುವ ಬಣ್ಣಗಳಲ್ಲೂ ರಾಸಾಯನಿಕವನ್ನು ಬಳಸದೆ ನೈಸರ್ಗಿಕ ಬಣ್ಣಗಳನ್ನೇ ಬಳಸುವ ಮೂಲಕ ಪರಿಸರ ಪ್ರೇಮಿ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.

ಇಂಥಹ ವಿಗ್ರಹ ತಯಾರಕರಲ್ಲಿ ಪುತ್ತೂರಿನ ತಾರನಾಥ ಆಚಾರಿ ಎನ್ನುವವರೂ ಸೇರುತ್ತಿದ್ದು, ಇವರ ಕುಟುಂಬದ ಸದಸ್ಯರೂ ಈ ಗಣೇಶನ ವಿಗ್ರಹ ತಯಾರಿಕೆಯಲ್ಲಿ ಕೈಜೋಡಿಸುತ್ತಾರೆ. ಕಳೆದ 78 ವರ್ಷಗಳಿಂದ ಗಣೇಶನ ವಿಗ್ರಹ ತಯಾರಿಸಿಕೊಂಡು ಬರುತ್ತಿರುವ ತಾರನಾಥ ಆಚಾರಿ ಕುಟುಂಬಕ್ಕೆ ಹಲವು ಆಸಕ್ತ ಯುವಕರೂ ತಮ್ಮ ಕೈಜೋಡಿಸುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿಯುವ ಈ ಯುವಕರು ಗಣೇಶನ ವಿಗ್ರಹ ತಯಾರಿಸುವ ಕಾಯಕದಲ್ಲೇ ಗಣೇಶನ ಸೇವೆ ನೆರವೇರಿಸಿಕೊಂಡು ಬರುತ್ತಿದ್ದಾರೆ.

 

ಆಳೆತ್ತರದಿಂದ ಹಿಡಿದು ಪುಟ್ಟ ಗಣಪತಿಯೂ ಇಲ್ಲಿ ಮಣ್ಣಿನಿಂದಲೇ ತಯಾರಾಗುತ್ತಿದ್ದು, ಈ ಕಾರಣದಿಂದಲೇ ಈ ಭಾಗದಲ್ಲಿ ಈ ಗಣೇಶನ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆಯೂ ಇದೆ. ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಿಗೆ ಇಲ್ಲಿಂದಲೇ ಗಣೇಶನ ವಿಗ್ರಹಗಳು ಸಾಗಾಟವಾಗುತ್ತದೆ. ಗಣೇಶನ ಹಬ್ಬದ ಆಚರಣೆಯ ಜೊತೆಗೆ ಪ್ರಕೃತಿಯನ್ನೂ ಆರಾಧಿಸಿಕೊಂಡು ಬರುವ ಕರಾವಳಿಯ ಜನ ವಿಗ್ರಹ ಖರೀದಿ ವಿಚಾರದಲ್ಲೂ ಪರಿಸರದ ಕುರಿತ ಕಾಳಜಿಯನ್ನು ಇವರು ಇಂದಿಗೂ ಮರೆಯದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಇಂದಿಗೂ ಮಣ್ಣಿನಿಂದ ತಯಾರಿಸಿದ ವಿಗ್ರಹಕ್ಕೇ ಹೆಚ್ಚಿನ ಬೇಡಿಕೆಯಿದೆ. ಒಟ್ಟಾರೆಯಾಗಿ ಹಬ್ಬಗಳ ಆಚರಣೆಯ ಹೆಸರಿನಲ್ಲಿ ಪರಿಸರದ ಹಾನಿಯ ಕುರಿತೂ ಯೋಚಿಸುವ ಅಗತ್ಯವಿದೆ ಎನ್ನುವುದನ್ನು ಜಿಲ್ಲೆಯ ಜನೆತೆಯ ಜೊತೆಗೆ ಇಲ್ಲಿನ ವಿಗ್ರಹ ತಯಾರಕರೂ ಮೈಗೂಡಿಸಿಕೊಂಡಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version