ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ದ ಕ ಜಿಲ್ಲಾ ಕ.ಸಾ.ಪ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆ -4

Published

on

ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ 17ನೇ ಶತಮಾನದ ಪುರಾತನ ಶಾಸನ ಅಧ್ಯಯನ ಹಾಗೂ 16 ನೇ ಶತಮಾನದ ವಿಗ್ರಹ ಪತ್ತೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆಸುವಂತಹ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆಯಡಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮುದ್ಯ ಎಂಬಲ್ಲಿ ಇರುವ ಪುರಾತನ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲಭ್ಯವಾದ ಸುಮಾರು 302 ವರ್ಷ ಪುರಾತನ 17ನೇ ಶತಮಾನದ ಕನ್ನಡ ಶಿಲಾಶಾಸನವನ್ನು ಸಂಶೋಧಕರಾದ ಡಾ. ಉಮಾನಾಥ ಶೆಣೈ ಅವರ ನೇತೃತ್ವದಲ್ಲಿ ಯುವ ಅಧ್ಯಯನಕಾರರಾದ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ತುಳುನಾಡ್ ಸಹಕಾರದೊಂದಿಗೆ ಅಧ್ಯಯನ ಮಾಡಲಾಯಿತು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಯನದಲ್ಲಿ ಸಹಕರಿಸಿದರು.

 

ಶಾಸನದ ಸ್ವರೂಪ :- ಪತ್ತೆಯಾದ ಶಿಲಾ ಶಾಸನವು ಸುಮಾರು 37 ಇಂಚು ಎತ್ತರ 21 ಇಂಚು ಅಗಲವಾಗಿದೆ. ಶಾಸನದ ಮುಂಭಾಗದಲ್ಲಿ 18 ಸಾಲುಗಳು ಹಾಗೂ ಹಿಂಭಾಗದಲ್ಲಿ 9 ಸಾಲುಗಳನ್ನು ಒಳಗೊಂಡ ಬರಹವನ್ನು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ.

ಶಾಸನದ ಶಿರೋಭಾಗದ ಮಂಟಪದಲ್ಲಿ ಶಿವಲಿಂಗದ ಆಕೃತಿಯನ್ನು ಹಾಗೂ ಬಲ, ಎಡಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ದೀಪಗಳನ್ನು ಕೆತ್ತಲಾಗಿದೆ. ಶಾಸನದ ಹಿಂಭಾಗದಲ್ಲಿ ಬಾಲವನ್ನು ಎತ್ತಿ ಮುಖವನ್ನು ಹಿಂದಕ್ಕೆ ತಿರುಗಿಸಿದ ಭಂಗಿಯಲ್ಲಿರುವ ನೆಗಳೆ (ಶಾರ್ದೂಲ) ಹಾಗೂ ಅದರ ಎಡಬಲ ಭಾಗದಲ್ಲಿ ಐದು ಎಸಳಿನ ಹೂವನ್ನು ಕೆತ್ತಲಾಗಿದೆ.

 

 

ಶಾಸನದ ಪೂರ್ಣ ಪಾಠಸ್ವಸ್ತಿ ಶ್ರೀ ಮಹಾಗಣಪತಯೇ ನಮಃ ಕಶಕ ವರುಷ ೧೬೪೪೧ ೫೧ ಸಂದ ವಿಷುಸಂವತ್ಸರದ ತುಲಾ ಬೃಹಸ್ಪತಿ ಸಿಂಹ ಮಾಸಂ ೨೧ನೆಯ ಶು| ಶ್ರೀ ಮದ(ಹ)ಗಡಿಯಂಕ ಸಿಂಗ ಕುಜುಂಬ ಶೆಟ್ಟಿಯರಾದಕರನೆಯ ಬೆಡತಿಯರು ಮಾಣಿಕ್ಕಳ ಡೊಂಬಳಿಯ ಆಳ್ವ ನಾರಣ ಶೆಟ್ಟಿ ಹೇಳಿ ಮಾಡಿಸಿದ ಧರ್ಮ್ಮಬಲ್ಯಾಳು ಹೊಸತಾಗಿ ಮಾಡಿಸಿದ ನಾಯಿಲದ ಕಳಭೂಮಿಯ ಫಲ ಮುಂತಾಗಿ ಮೆದುಗೆಯ ದಸ್ತಾಂನದಲಿ ವರುಷ ಪ್ರತಿ ಸೋಣೆ ತಿಂಗಳಲಿ ದಿನ ಮೂವತ್ತು ದಿನಂಪ್ರತಿ ಬಂದಯಿಸಕ್ಕೆ ಬ್ರಾಂಹಣಭೋಜನವಾಚಂದ್ರಾರ್ಕ್ಕವಾಗಿ ನಡೆಸುದು ಈಧರ್ಮ್ಮವನ್ನು ನಾೖಳ ಬಾಳುವರು ಪಾಲಿಸಿ ನಡೆಸುವರು ಯೀ ತುಳು ರಾಜ್ಯಕ್ಕೆ ಅಧೀಕರಿಸಿದ ಧರ್ಮ್ಮವನು ಬಲ್ಲಾಳು ಮಾಡಿಡದಕ್ಕಿಲ್ಲಾರು ಕಂದಕವನೆಸವರಿಗೆ ಸಾವಿರ ಕಪಿಲೆಯಂ ಬ್ರಾಂಹಣರಂಮಗು ತಾಯಿ ತಂದೆಯರಂ ವಾರಣಾಸಿಯಲುವಧಿಸಿದ ಪಾಪವದು ಪೀಠದಲಿ ಶಿವಕಳೆಯಯೆತ್ತುಗಳ ಪಾದೆಯ ಮಹಾ ಧರ್ಮ್ಮ ಶಾಸನಮಂ ಬರೆದವನು ಕನ್ನೋರ್ಗದ ಕವಿ ಗಜಾರಿಕುಶಲಂಗೋಯ ಸೇನೆಭೋರ ಮಗ ಕೇಶವನಾಥನ ಬರಹಯೀಮಹಾಧರ್ಮ್ಮಮಂ ಕಲ್ಲಿಗೇರೆಸಿ ಸಮರ್ಪಿಸಿದ ಬೆಲ್ಲಾರೆ ಗೂರಿಗೌಡ ನಾರಣ ಶೆಟ್ಟಿ ಹಲ ನಿಲ್ಲಿಸಿದ ಮಂಗಳ ಮಹಾ ಶ್ರೀ

ಶಾಸನದ ಸಾರಾಂಶ ಸ್ವಸ್ತಿ ಶ್ರೀ ಮಹಾಗಣಪತಿಯೇ ನಮಃ ಎಂಬ ಪ್ರಾರ್ಥನಾ ಶ್ಲೋಕದಿಂದ ಪ್ರಾರಂಭವಾಗುವ ಈ ಕನ್ನಡ ಶಾಸನವನ್ನು ಶಕ ವರುಷ 1644 ಅಂದರೆ ಕ್ರಿಸ್ತಶಕ 1722 ವಿಕೃತಿ ನಾಮ ಸಂವತ್ಸರದ ತುಲಾ ಬೃಹಸ್ಪತಿ ಸಿಂಹ ಮಾಸದಲ್ಲಿ ಸ್ಥಾಪಿಸಲಾಗಿದೆ.

ಈ ಶಾಸನದ ಪ್ರಕಾರ ವರ್ಷಂಪ್ರತಿ ಮೆದುಗೆ ದೇವಸ್ಥಾನಕ್ಕೆ ಸೋಣ ತಿಂಗಳಲ್ಲಿ ಅಥವಾ ಸಿಂಹ ಮಾಸದಲ್ಲಿ ಮೂವತ್ತು ದಿನಗಳಲ್ಲಿ ದಿನಂಪ್ರತಿ ಬರುವ ಬ್ರಾಹ್ಮಣರಿಗೆ ಅವರು ಬಂದ ಸಮಯಕ್ಕೆ ಬಲ್ಲಾಳರು ಹೊಸತಾಗಿ ಮಾಡಿಸಿದ ನಾಯಿಲದ ಕೆಳ ಭೂಮಿಯ ಫಲದಲ್ಲಿ ಭೋಜನವನ್ನು ನೀಡಬೇಕು. ಈ ಧರ್ಮವನ್ನು ನಾಯಿಲದಲ್ಲಿ ಬಾಳುವವರು ಅಚಂದ್ರಾರ್ಕವಾಗಿ ಪಾಲಿಸಿಕೊಂಡು ಬರತಕ್ಕದ್ದು. ಇದನ್ನು ಈ ತುಳು ರಾಜ್ಯಕ್ಕೆ ಅಧೀಕರಿಸಿದ ಬಲ್ಲಾಳರು ಮಾಡಿಲ್ಲವೆಂದು ಯಾರಾದರೂ ಬೇಧ ಮಾಡಿದರೆ ಅಥವಾ ಕಂದಕವನ್ನು ಏರ್ಪಡಿಸಿದರೆ ಅವರಿಗೆ ಸಾವಿರ ಕಪಿಲೆಯನ್ನು, ಬ್ರಾಹ್ಮಣರನ್ನು, ಮಗು, ತಾಯಿ, ತಂದೆಯರನ್ನು ವಾರಣಾಸಿಯಲ್ಲಿ ವಧಿಸಿದ ಪಾಪ ತಗಲುವುದು ಎಂಬ ಶಾಪಾಶಯವಿದೆ. ಪೀಠದಲ್ಲಿ ಶಿವಕಳೆಯಿರುವ, ಎತ್ತುಗಳ ಪಾದೆಯ ಈ ಧರ್ಮಶಾಸನವನ್ನು ನಾರಣ ಶೆಟ್ಟಿ ಎಂಬುವವರು ಹೇಳಿ, ಕೇಶವನಾಥ ಎಂಬವರಲ್ಲಿ ಬರೆಸಿ ಸಮರ್ಪಿಸಿದರು ಎಂಬುದಾಗಿದೆ.

ಇದರಲ್ಲಿ ಗಡಿಯಂಕ ಸಿಂಗ ಕುಜುಂಬ ಶೆಟ್ಟಿ, ಮಾಣಿಕ್ಕಳ ಡೊಂಬಳಿಯ ಆಳ್ವ, ನಾರಣ ಶೆಟ್ಟಿ, ಬೆಲ್ಲಾರೆ ಗೂರಿ ಗೌಡ, ಕನ್ನರ್ಗದ ಕವಿ ಗಜಾರಿ ಕುಶಲಂಗೋಯ (ಕುಶ ಅಂಣಯ) ಸೇನೆಭೋರ ಇತ್ಯಾದಿ ವ್ಯಕ್ತಿನಾಮ ಮತ್ತು ತುಳು ರಾಜ್ಯ, ವಾರಣಾಸಿ, ಮಾಣಿಕ್ಕಳ, ನಾಯಿಲ, ಎತ್ತುಗಳ ಪಾದೆ, ಬೆಲ್ಲಾರೆ ಸ್ಥಳನಾಮಗಳು ಕಂಡು ಬರುತ್ತವೆ.

ಪತ್ತೆಯಾದ ಮೂರ್ತಿ : ಈ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಸಮಯದಲ್ಲಿ ಭೂಮಿಯ ಒಳಗೆ ಒಂದು ಸಣ್ಣ ಪಂಚ ಲೋಹದ ಮೂರ್ತಿಯು ಲಭ್ಯವಾಗಿದ್ದು, ಸದೃಢ ಮೈಕಟ್ಟಿನ, ಅಲಂಕೃತ ಕುದುರೆ ಏರಿ ಕುಳಿತ ಭಂಗಿಯಲ್ಲಿದೆ. ಮೂರ್ತಿಯು ಪುರುಷನಾಗಿದ್ದು, ಬಲ ಕೈಯಲ್ಲಿ ಹರಿತವಾದ ಖಡ್ಗದ ಆಕಾರದ ಆಯುಧವನ್ನು ಹಿಡಿದಿದ್ದು, ಮೂರ್ತಿಯ ಎರಡು ಕೈ ಮಣಿ ಗಂಟು ಹಾಗೂ ಕೈ ರಟ್ಟೆಯಲ್ಲಿ ಆಭರಣವನ್ನು ಧರಿಸಿದ್ದು, ಎರಡು ಕಾಲುಗಳಲ್ಲಿ ಖಡಗ ಧರಿಸಿದ್ದಾನೆ. ಮೂರ್ತಿಯ ಕಿವಿಯಲ್ಲಿ ಕರ್ಣಕುಂಡಲಗಳಿದ್ದು, ಉದ್ದನೆಯ ಕಿರೀಟಧಾರಿಯಾಗಿ ನೋಡಲು ವೀರಯೋಧನಂತೆ ಕಾಣುತ್ತಾನೆ. ಮೂರ್ತಿ, ಕುದುರೆಯ ಎತ್ತರ ಸುಮಾರು 3 ಇಂಚು ಎತ್ತರ ಇರಬಹುದು.

 

 

ಶಾಸನ ತಜ್ಞ ಹಾಗೂ ವಿಗ್ರಹ ತಜ್ಞರಾದ ಡಾ. ವೈ. ಉಮಾನಾಥ ಶೆಣೈ ಅವರ ಪ್ರಕಾರ ಇದು ಸುಮಾರು ಹದಿನಾರನೆಯ ಶತಮಾನಕ್ಕೆ ಸಂಬಂಧಿಸಿದಾಗಿದ್ದು, ಜೈನ ಸಂಪ್ರದಾಯದ ಬ್ರಹ್ಮದೇವರ ಮೂರ್ತಿ. ಇದು ಸ್ಥಳೀಯ ಜೈನ ಬಲ್ಲಾಳ ಅರಸರು ಈ ದೇವಾಲಯಕ್ಕೆ ಕೊಟ್ಟದ್ದಿರಬೇಕು. ಇದು ಪಂಚಲಿಂಗೇಶ್ವರನ ದೇವಾಲಯವಾಗಿರುವುದರಿಂದ ಶಕ್ತಿ ಪರಾಕ್ರಮಗಳ ಜೈನ ಬ್ರಹ್ಮ ದೇವರ ಮೂರ್ತಿಯನ್ನು ಇಲ್ಲಿಗೆ ಕೊಟ್ಟಿರುವುದು ತೀರ ಸಹಜವೇ ಆಗಿದೆ ಎನ್ನುತ್ತಾರೆ.

ಈ ಶಾಸನ ಅಧ್ಯಯನ ಮಾಡುವ ಸಮಯದಲ್ಲಿ ದೇವಸ್ಥಾನದ ಭಜಕರಾದ ನಟ್ಟಿ ವೇಣುಗೋಪಾಲ ನಾಯಕ್, ನಾರಾಯಣ ಪೂಜಾರಿ, ಶರತ್ ಕುಮಾರ್ ದಾಮೋದರ ಗೌಡ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version