ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ವರ್ಷಕ್ಕೆ 6 ಮುಟ್ಟಿನ ರಜೆ ಜಾರಿ ಮಾಡಲಿರುವ ರಾಜ್ಯ ಸರ್ಕಾರ: ವರದಿ

Published

on

ರಾಜ್ಯದ ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಇರುವ ಮಹಿಳೆಯರಿಗೆ ವಾರ್ಷಿಕವಾಗಿ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆ ಪರಿಚಯಿಸಲು ರಾಜ್ಯ ಸರ್ಕಾರವು ಸಿದ್ಧವಾಗಿದೆ. ಮಹಿಳೆಯರಿಗೆ ಮುಟ್ಟಿನ ರಜೆಯ ಬಗ್ಗೆ ಪರಿಶೀಲಿಸಲು ರಚಿಸಲಾದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಬೆನ್ನಿಗೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.

“ಈ ಬಗ್ಗೆ ಡಾ ಸಪ್ನಾ ಮುಖರ್ಜಿ ನೇತೃತ್ವದ ತಂಡವನ್ನು ರಚಿಸಲಾಗಿದ್ದು, ಅದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಚರ್ಚೆ ನಡೆಸುತ್ತೇವೆ. ರಜೆಯ ಒಪ್ಪಿಗೆಗಾಗಿ ಅದನ್ನು ಶಾಸಕಾಂಗದ ಮುಂದೆ ಇಡಲಾಗುವುದು” ಎಂದು ಕಾರ್ಮಿಕ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ತಿಳಿಸಿದ್ದಾರೆ ಎಂದು TNIE ವರದಿ ಮಾಡಿದೆ.

 

 

ಸರ್ಕಾರವು ಈ ಕ್ರಮವನ್ನು ಮೊದಲು ಖಾಸಗಿ ವಲಯಕ್ಕೆ ಪರಿಚಯಿಸಲು ಯೋಜಿಸಿದ್ದು, ಅದನ್ನು ನೀತಿ ಮಾಡಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಮಾಡಲು ಯೋಜಿಸಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯದ ಬಗ್ಗೆ ಒಂದು ನೀತಿ ಇರಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ಮೊಹ್ಸಿನ್ ಹೇಳಿದ್ದಾರೆ.

 

ಈ ವರ್ಷದ ಜುಲೈನಲ್ಲಿ, ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆಯ ಬಗ್ಗೆ ಮಾದರಿ ನೀತಿಯನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವು ಕೇಳಿತ್ತು. ಉದ್ಯೋಗದಾತರು ಅಂತಹ ರಜೆಯನ್ನು ನೀಡುವುದನ್ನು ಕಡ್ಡಾಯಗೊಳಿಸುವುದು ಮಹಿಳೆಯರಿಗೆ ಅವರ ಉದ್ಯೋಗಗಳಲ್ಲಿ ಭಾಗವಹಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ಅದು ಹೇಳಿತ್ತು.

ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೂಡಾ ಕರ್ನಾಟಕದಲ್ಲಿ ಮುಟ್ಟಿನ ರಜೆಯನ್ನು ಪರಿಚಯಿಸುವ ಪ್ರಸ್ತಾಪದ ಬಗ್ಗೆ ಮಾಧ್ಯಮದ ಜೊತೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

 

ಕಾರ್ಮಿಕ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಪ್ರಸ್ತಾವನೆ ಚರ್ಚೆ ಹಂತದಲ್ಲಿದೆ. ಸಚಿವರು ಅದನ್ನು ತರಲು ಯೋಜಿಸಿದ್ದರು. ಆದರೆ ಅದನ್ನು ಮೊದಲು ಕಾರ್ಮಿಕ ಇಲಾಖೆಯು ಕೆಲವೇ ದಿನಗಳಲ್ಲಿ ಪರಿಶೀಲಿಸುತ್ತದೆ. ಅದರ ನಂತರ, ಇದು ಇಲಾಖೆ ಮತ್ತು ಸರ್ಕಾರಿ ಹಂತಗಳಲ್ಲಿ ಚಲಿಸುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, IT-BT, ಆರೋಗ್ಯ, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಗಳು ಮತ್ತು ಇತರ ಸಂಬಂಧಿತ ವಲಯಗಳ ಜೊತೆಗೆ ಕೂಡಾ ಸಲಹೆ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, “ನಮ್ಮ ಉದ್ಯೋಗಿಗಳಲ್ಲಿ ಮಹಿಳೆಯರು ಗಮನಾರ್ಹವಾಗಿ ಇದ್ದಾರೆ. ಅವರ ಅಗತ್ಯತೆಗಳು ಪುರುಷರಿಗಿಂತ ಭಿನ್ನವಾಗಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂವೇದನಾಶೀಲವಾಗಿರುವ ಸರ್ಕಾರವಾಗಿ ಈ ಅಗತ್ಯಗಳಿಗೆ ನಾವು ಈ ಸಮಸ್ಯೆಯನ್ನು ಆದ್ಯತೆಯಾಗಿ ತೆಗೆದುಕೊಳ್ಳುತ್ತಿದ್ದೇವೆ. ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

 

1992 ರಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿ ಬಿಹಾರ ಹೊರಹೊಮ್ಮಿತ್ತು. ಅಲ್ಲಿ ಪ್ರತಿ ತಿಂಗಳು ಎರಡು ದಿನಗಳ ರಜೆಯನ್ನು ಮಹಿಳೆಯರಿಗೆ ಒದಗಿಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ಸರ್ಕಾರಗಳು ಮಹಿಳೆಯರಿಗೆ ಮುಟ್ಟಿನ ರಜೆಯನ್ನು ನೀಡುತ್ತವೆ. ಜಾಗತಿಕವಾಗಿ, ಸ್ವೀಡನ್, ಇಟಲಿ, ದಕ್ಷಿಣ ಕೊರಿಯಾ, ತೈವಾನ್ ಮತ್ತು ಜಪಾನ್ ಮಹಿಳೆಯರಿಗೆ ಮುಟ್ಟಿನ ರಜೆಗಳನ್ನು ನೀಡುತ್ತವೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version