Published
3 months agoon
By
Akkare Newsಮೂಡಾ ವಿವಾದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣಾ ಅವರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಮಾಡಿದೆ ಎಂದು ಮಂಗಳವಾರ ವರದಿಯಾಗಿದೆ.
ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೂಡಾ ಹಗರಣದ ಬಗ್ಗೆ ಪ್ರಕರಣ ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ಅವರ ವಿರುದ್ಧ 2015ರಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಗೈರುಹಾಜರಾದ ಕಾರಣ ವಾರೆಂಟ್ ಜಾರಿಯಾಗಿದೆ ಎಂದು ವರದಿಗಳು ಹೇಳಿವೆ.
ಈ ನಡುವೆ ಸಿಎಂ ಹಾಗೂ ಪತ್ನಿ ಸೇರಿದಂತೆ ಇತರರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ಮುಂದುವರೆದಿದ್ದು, ಮೂಲ ಜಮೀನು ಸ್ಥಳಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಕರೆದೊಯ್ದು ಮಹಜರು ನಡೆಸಿದ್ದಾರೆ. ಈ ವೇಳೆ ಕಂದಾಯ, ಸರ್ವೇ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ಟೇಪ್ ಹಿಡಿದು ಅಳತೆ ಮಾಡಿ ತನಿಖೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಮುಡಾ ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಮೈಸೂರು ಲೋಕಾಯುಕ್ತ ಕರೆದ ಹಿನ್ನೆಲೆ ಬೆಳ್ಳಂಬೆಳಗ್ಗೆ 7.30ಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದರು. ಬಳಿಕ ಲೋಕಾ ಪೊಲೀಸರು, ಸ್ನೇಹಮಯಿ ಕೃಷ್ಣ ಅವರನ್ನು ಮಹಜರು ಮಾಡಲು ಸ್ಥಳಕ್ಕೆ ಕರೆದೊಯ್ದರು.
ಮಹಜರು ಮುನ್ನ ಮಾತನಾಡಿದ್ದ ಕೃಷ್ಣ, “ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ನೋಟಿಸ್ ಬಂದಿಲ್ಲ. ಆದರೆ, ವಿಚಾರಣೆಯಲ್ಲಿ ಯಾವುದೇ ದಾಖಲಾತಿ ಕೋರಿದ್ದರೆ ನಾನು ಕೊಡಲು ಸಿದ್ಧ. ಮೊದಲು ದೂರು ನೀಡಿದ ಸಂದರ್ಭ ನೀಡಿದ ದಾಖಲಾತಿಗಳನ್ನು ಈಗಾಗಲೇ ಕೊಟ್ಟಿದ್ದೇನೆ. ಈಗ ಮತ್ತೆ ವಿಚಾರಣೆ ಸಂದರ್ಭದಲ್ಲಿ ದಾಖಲಾತಿಗಳನ್ನು ಕೇಳಿದರೆ ಕೊಡಲು ಸಿದ್ಧ. ಇದರ ಜೊತೆಗೆ ಮುಡಾದಲ್ಲಿ ನಡೆದ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬುದು ನನ್ನ ಒತ್ತಾಯ” ಎಂದು ಹೇಳಿದ್ದರು.