Published
4 weeks agoon
By
Akkare Newsಮುಡಿಪು : ರಾಜಕೀಯ ರಹಿತವಾಗಿ ಆರೋಗ್ಯಯುತ ಕಾರ್ಯದಲ್ಲಿ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ರಕ್ತದಾನದ ಜಾಗೃತಿ ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ರಕ್ತದಾನ ಎಂಬುದು ಶ್ರೇಷ್ಟದಾನ ಅನ್ನುವುದನ್ನು ಮನವರಿಕೆ ಮಾಡಿಕೊಂಡು ವಿದ್ಯಾರ್ಥಿಗಳು ಮಹತ್ಕಾರ್ಯದಲ್ಲಿ ಭಾಗವಹಿಸಿರಿ ಎಂದು ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಹೇಳಿದ್ದಾರೆ.
ಅವರು ಕಾಲೇಜು ಶಿಕ್ಷಣ ಇಲಾಖೆ, ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ ಕಾರವಾರ ಇದರ ಆಶ್ರಯದಲ್ಲಿ ಯೂತ್ ರೆಡ್ ಕ್ರಾಸ್ , ಎನ್ ಎಸ್ ಎಸ್ ರೇಂಜರ್ಸ್- ರೋರ‍್ಸ್ ಘಟಕ ಹಿರಿಯ ವಿದ್ಯಾರ್ಥಿ ಸಂಘ ಇದರ ಆಶ್ರಯದಲ್ಲಿ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರಗಿದ ಬೃಹತ್ ರಕ್ತದಾನ ಶಿಬಿರ ಹಾಗೂ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ರಕ್ತದ ಕೊರತೆಯಾಗುತ್ತಿದೆ ಅನ್ನುವ ಕೂಗು ಇದೆ. ಅದನ್ನು ಹೋಗಲಾಡಿಸುವ ಸಲುವಾಗಿ ಕಲ್ಲೂರು ಟ್ರಸ್ಟ್ ನಿರಂತರವಾಗಿ ವಿವಿಧ ಸಂಘಟನೆಗಳ ಜಂಟಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಿದೆ ಎಂದರು.
ಸಾಹಿತಿ ನಾಗೇಶ್ ಕಲ್ಲೂರು ಮಾತನಾಡಿ. ಧರ್ಮಗಳ ಬೇಧವಿಲ್ಲದ ಊರು ಕಲ್ಲೂರು. ಸಮಾಜದ ಮುಂಚೂಣಿಗೆ ಬರಲು ಹಿರಿಯ ಪುತ್ತಬ್ಬ ಬ್ಯಾರಿ ಸದಾ ಬೆನ್ನು ತಟ್ಟುತ್ತಿದ್ದರೆ, ಅವರ ಪತ್ನಿ ಎಲ್ಲಾ ಸಂದರ್ಭದಲ್ಲಿಯೂ ಊರವರ ಕಷ್ಟಕ್ಕೆ ಸ್ಪಂಧಿಸಿದವರು. ಅಂತಹ ದಂಪತಿಯ ಪುತ್ರನಾಗಿರುವ ಇಬ್ರಾಹಿಂ ಕಲ್ಲೂರು ಕೂಡಾ ಅವರು ತೋರಿಸಿದ ದಾರಿಯಲ್ಲೇ ಮುನ್ನಡೆಯುತ್ತಿರುವುದು ಸಾಮಾಜಿಕ ಮೌಲ್ಯಗಳಿಗೆ ಸಿಕ್ಕಂತಹ ಸಂಪತ್ತು. ಕಳೆದ 30 ವರ್ಷಗಳಿಂದ ರಕ್ತದ ಬೇಡಿಕೆ ಹೆಚ್ಚಾಗಿದೆ. ಕಲಬೆರೆಕೆ ಆಹಾರಗಳಿಂದ ಆರೋಗ್ಯದಲ್ಲಿ ಸಮಸ್ಯೆ, ಕಾಯಿಲೆಗಳ ಸಂಖ್ಯೆ, ಶಸ್ತ್ರಚಿಕಿತ್ಸೆಗಳು ಹೆಚ್ಚಾಗುತ್ತಿದೆ. ಸಂಸ್ಕರಿತ, ಸಿಹಿ ರೂಪ ಸಕ್ಕರೆಯುಳ್ಳ ಆಹಾರಗಳನ್ನು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ರಕ್ತವನ್ನು ಶುದ್ಧವಾಗಿರಿಸುವ ಮೂಲಕ ಇತರರಿಗೆ ದಾನ ನೀಡುವಂತಾಗಿರಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ದ.ಕ ಜಿಲ್ಲಾ ಗೃಹರಕ್ಷಕದಳ ಕಮಾಂಡೆAಟ್ ಡಾ| ಮುರಳೀ ಮೋಹನ್ ಚೂಂತಾರು ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರಕ್ತ ಕೊಡಲಾಗುತ್ತದೆ. ರಿಪ್ಲೇಸ್ ಮೆಂಟ್ ಗಳನ್ನೂ ಕೇಳುವುದಿಲ್ಲ. ಇಂಡಿಯನ್ ರೆಡ್ ಕ್ರಾಸ್ ನಡೆಸುವ 12 ಬ್ಲಡ್ ಬ್ಯಾಂಕ್ ಗಳಿವೆ. ಪ್ರತಿದಿನ 8-15,000 ಲೀ. ರಕ್ತದ ಅವಶ್ಯಕತೆಯಿದೆ.ದೇಶದಲ್ಲಿ 1.44 ಕೋಟಿ ರಕ್ತದಾನಿಗಳು ಬೇಕಾಗಿದ್ದಾರೆ. ರಕ್ತಕ್ಕೆ ಹಣ ಸುಲೀತಾರೆ ಅನ್ನುವುದು ತಪ್ಪು ಮಾಹಿತಿ.ಇನ್ನೊಬ್ಬರ ಜೀವ ಉಳಿಸಲು ವೈದ್ಯನಾಗಬೇಕೇ ಇಲ್ಲ. ಮಾನವೀಯ ಗುಣವುಳ್ಳ ಮನುಷ್ಯನಾದರೆ ಸಾಧ್ಯ. ಮಾನವೀಯತೆ ಮತ್ತು ನಿಸ್ವಾರ್ಥ ಸೇವೆಗಾಗಿ ಎನ್ ಎಸ್ ಎಸ್ ಮತ್ತು ರೆಡ್ ಕ್ರಾಸ್‌ನ ಜೊತೆಗೆ ಕೈಜೋಡಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಮಾತನಾಡಿ, ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಕಾಲೇಜಿನ ಎನ್ ಎಸ್ ಎಸ್ ಘಟಕ ಸೇರಿದಂತೆ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬರುತ್ತಿದ್ದಾರೆ. ರಕ್ತದಾನದ ಶ್ರೇಷ್ಟತೆಯನ್ನು ಅರಿತ ವಿದ್ಯಾರ್ಥಿಗಳು ಇತರರಿಗೂ ರಕ್ತದಾನ ನಡೆಸುವಂತೆ ಪ್ರೇರೇಪಿಸಿರಿ ಎಂದರು.
ಮಂಗಳೂರು ವಿ.ವಿ ಮಾಜಿ ಕುಲಸಚಿವ ಡಾ. ಎ.ಎಂ.ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆರೋಗ್ಯ ಶಿಬಿರ ಸಂಚಾಲಕರಾದ ಅಝೀಝ್ ಕಲ್ಲೂರು, ಕಲ್ಲೂರು ಟ್ರಸ್ಟ್ ನ ಉಮ್ಮರ್ ಕುಂಞಿ ಸಾಲೆತ್ತೂರು, ಸಂದೀಪ್ ರೇವಣ್ಕರ್ ಕಾರವಾರ ಉಪಸ್ಥಿತರಿದ್ದರು..ವೇದಿಕೆಯಲ್ಲಿ ಸಾಧಕರಾದ ಸತೀಶ್ ಗಟ್ಟಿ, ಮುರುಳಿ ಮೋಹನ್ ಚೂಂತಾರು, ಹೈದರ್ ಅಲಿ, ನಾಗೇಶ್ ಕಲ್ಲೂರು, ಉಮ್ಮರ್ ಕುಂಞಿ ಸಾಲೆತ್ತೂರು, ನಾಗೇಶ್ ಕಲ್ಲೂರು, ಡಾಕ್ಟರ್ ಗಣೇಶ್ ಪ್ರಸಾದ್ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಯೂತ್ ರೆಡ್ ಕ್ರಾಸ್ ಸಂಚಾಲಕ ಪ್ರೊ. ಹೈದರ್ ಆಲಿ ಸ್ವಾಗತಿಸಿದರು. ರೇಂಜರ್ ಘಟಕ ಸಂಚಾಲಕರು ಅಕ್ಷತಾ ಸುವರ್ಣ ರಕ್ತದಾನಿಗಳ ವಿವರ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಶೋಭಾಮಣಿ ವಂದಿಸಿದರು. ವಿದ್ಯಾರ್ಥಿನಿ ಮರಿಯಂ ಸಫೀದ ನಿರೂಪಿಸಿದರು. ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟು 60 ಮಂದಿ ರಕ್ತದಾನ ಮಾಡಿದರು.