Published
2 hours agoon
By
Akkare Newsರಾಜ್ಯ ಮುಜುರಾಯಿ ಇಲಾಖೆಯ ‘ಎ’ ಗ್ರೇಡ್ ದೇವಸ್ಥಾನ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ ಗಳಿಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಲು ಆಗ್ರಹಿಸಿ ನವೆಂಬರ್ 11 ರಂದು ದೇವಸ್ಥಾನದ ವಠಾರದಲ್ಲಿ ನ್ಯಾಯ ಸಿಗುವವರೆಗೆ ಧರಣಿ ನಡೆಸಲಾಗುತ್ತದೆ ಎಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಹೇಳಿದರು.
ಅವರು ನ 05 ರಂದು ಮಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ 2004ರಲ್ಲಿ ಸೌತಡ್ಕ ಕ್ಷೇತ್ರದ ಆಡಳಿತ ಸಮಿತಿಗೆ ಸೇರಿದ ಮೂವರು ದೇವಸ್ಥಾನಕ್ಕೆಂದು 6ಲಕ್ಷ ರೂ.ಗೆ 3.46ಎಕ್ರೆ ಭೂಮಿ ಖರೀದಿಸಿದ್ದರು. ಆದರೆ ದೇವಸ್ಥಾನದ ಹೆಸರಲ್ಲಿ ಜಾಗ ಖರೀದಿಸಲು ಕಾನೂನು ತೊಡಕು ಎದುರಾದ ಹಿನ್ನೆಲೆಯಲ್ಲಿ ವಾಸುದೇವ ಶಬರಾಯ 1.23ಎಕ್ರೆ, ರಾಘವ 1.23ಎಕ್ರೆ ಹಾಗೂ ವಿಶ್ವನಾಥ 1ಎಕ್ರೆಯನ್ನು ತಮ್ಮ ಸ್ವಂತ ಹಣದಲ್ಲಿ ಖರೀದಿಸಿದ್ದರು. ವರ್ಷದ ಬಳಿಕ ಭಕ್ತರ ದೇಣಿಗೆಯಿಂದ ಆ ಹಣವನ್ನು ಅವರಿಗೆ ಹಿಂದುರುಗಿಸಲಾಗಿತ್ತು ಎಂದಿದ್ದಾರೆ.
ವಿಶ್ವನಾಥ ಅವರು ಭೂಮಿಯನ್ನು ದೇವಸ್ಥಾನದ ಹೆಸರಿಗೆ ಮಾಡಲು ಹೋಗುವಾಗ ಅದು ಕೃಷಿ ಭೂಮಿ ಎಂದು ಮತ್ತೆ ಕಾನೂನು ತೊಡಕು ಎದುರಾಗಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಎಂಬ ಹೆಸರಲ್ಲಿ ಟ್ರಸ್ಟ್ ಮಾಡಿದೆ. ಆಗಿನ ಸಮಿತಿ ಅಧ್ಯಕ್ಷ ಕೃಷ್ಣ ಭಟ್ ಈ ಟ್ರಸ್ಟನ್ನು ದೇವಳದಿಂದ ಬೇರ್ಪಡಿಸಿ ಪ್ರತ್ಯೇಕ ಸಂಸ್ಥೆಯನ್ನಾಗಿ ಮಾಡಿದ್ದಾರೆ. ಈ ಟ್ರಸ್ಟ್ಗೆ ವಾಸುದೇವ ಶಬರಾಯರ 1.23ಎಕ್ರೆ ಭೂಮಿಯನ್ನು ಟ್ರಸ್ಟ್ಗೆ ವರ್ಗಾಯಿಸಿದ್ದಾರೆ. ರಾಘವ ಅವರು ಆರ್‌ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಗಿಫ್ಟ್ ಡೀಡ್ ಆಗಿ 1.23ಎಕ್ರೆ ಭೂಮಿಯನ್ನು ನೀಡಿದ್ದಾರೆ. ವಿಶ್ವನಾಥರ ಹೆಸರಲ್ಲಿ ಇನ್ನೂ ಆ ಭೂಮಿಯಿದ್ದು, ದೇವಸ್ಥಾನದ ಹೆಸರಿಗೆ ಬರೆದುಕೊಡಲು ಯಾವಾಗಲೂ ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
3.46ಎಕ್ರೆ ಭೂಮಿಯಲ್ಲಿರುವ ವಾಣಿಜ್ಯ ಕಟ್ಟಡ ಬಾಡಿಗೆ, ವಸತಿ ಗೃಹದ ಬಾಡಿಗೆ ಸೇರಿದಂತೆ ವರ್ಷಕ್ಕೆ ಕೋಟಿಗಟ್ಟಲೆ ಹಣ ಖಾಸಗಿಯವರ ಪಾಲಾಗುತ್ತಿದ್ದು, ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೇ ಬಿಟ್ಟುಕೊಡಬೇಕು. ಈ ಹಿನ್ನಲೆ ನವೆಂಬರ್ 11ರಿಂದ ಸೌತಡ್ಕ ಕ್ಷೇತ್ರದ ಮುಂದೆ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ನ್ಯಾಯ ಸಿಗುವವರೆಗೆ ಹೋರಾಟ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂರಕ್ಷಣಾ ವೇದಿಕೆಯ ಉಪಾಧ್ಯಕ್ಷ ಪ್ರಶಾಂತ್ ರೈ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್, ಕೋಶಾಧಿಕಾರಿ ವಿಶ್ವನಾಥ ಉಪಸ್ಥಿತರಿದ್ದರು.