Published
3 weeks agoon
By
Akkare Newsಕಡಬ: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಮಾರಧಾರ ನದಿಯಲ್ಲಿ ಜೆಸಿಬಿ ಬಳಸಿ ನಡೆಯುವ ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದರು. ಅಲ್ಲದೆ ಗ್ರಾಮಸ್ಥರೇ ಸೇರಿ ಅಲ್ಲಿನ ಬೋಟ್ ಗಳನ್ನು ಕಟ್ಟಿ ಹಾಕಿದ್ದರು. ಈ ವಿಚಾರ ಠಾಣೆಯ ಮೆಟ್ಟಿಲೇರಿತ್ತು.
ಇದೀಗ ಚಾರ್ವಾಕ ಭಾಗದಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ನದಿಯ ಮತ್ತೊಂದು ಭಾಗವಾದ ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂಟ್ಯಾನದಿಂದ ಯಾಂತ್ರಿಕೃತ ಬೋಟ್ ಗಳ ಮೂಲಕ ಮರಳುಗಾರಿಕೆ ನಡೆಸಲು ಸಿದ್ದತೆ ಮಾಡಿದ್ದು ಈ ರಸ್ತೆಯಲ್ಲಿ ಬಂದ ಮರಳು ತುಂಬಿದ ಟಿಪ್ಪರನ್ನು ಸ್ಥಳೀಯರು ತಡೆದಿರುವ ಘಟನೆ ಡಿ.5ರಂದು ಸಂಜೆ ನಡೆದಿದೆ.
ಕುಂತೂರು- ಅಗತ್ತಾಡಿ- ಕುಂಟ್ಯಾನ ರಸ್ತೆಯು ಇತ್ತೀಚೆಗೆ ಸಾರ್ವಜನಿಕರ ಹೋರಾಟದ ಫಲವಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿತ್ತು. ಮರಳು ತುಂಬಿದ ವಾಹನ ಈ ರಸ್ತೆಯಲ್ಲಿ ಸಾಗಿದರೆ ರಸ್ತೆ ಸಂಪೂರ್ಣ ಹಾಳಾಗುತ್ತದೆ ಜೊತೆಗೆ ಶಾಲಾ ಮಕ್ಕಳು ಬರುವಾಗ ಕಿರಿದಾದ ದಾರಿಯಿಂದ ಅಪಘಾತ ಸಂಭವಿಸುವ ಸಾಧ್ಯತೆಯನ್ನರಿತು ಸ್ಥಳೀಯರು ತಡೆಯೊಡ್ಡಿರುವುದಾಗಿ ತಿಳಿದು ಬಂದಿದೆ. ಗಣಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ವಾಹನವನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ನೆರೆದಿದ್ದ ಜನರು ಪಟ್ಟು ಹಿಡಿದಿದ್ದಾರೆ.
ಮರಳುಗಾರಿಕೆಯಲ್ಲಿ ತೊಡಗಿರುವ ಬಿಜೆಪಿ ಮುಖಂಡರೊಬ್ಬರ ನೇತೃತ್ವದ ತಂಡ ಬೋಟ್ ಕಟ್ಟಿ ಹಾಕಿದವರ ವಿರುದ್ದ ಅಟ್ರಾಸಿಟಿ ಕೇಸು ದಾಖಲಿಸುವ ಬಗ್ಗೆ ಬೆದರಿಸಿದ್ದರು. ಇದರಿಂದ ಭಾರೀ ಸಂಖ್ಯೆಯಲ್ಲಿ ಕಡಬ ಠಾಣೆಗೆ ಗ್ರಾಮಸ್ಥರು ಆಗಮಿಸಿದ್ದರು .
ಚಾರ್ವಾಕ ಕುಂಬ್ಲಾಡಿ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖರು ಊರವರು ಸೇರಿ ಚಾರ್ವಾಕ ಗ್ರಾಮದ ಭಾಗದಲ್ಲಿ ಮರಳುಗಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದಲ್ಲದೆ, ನಿರ್ಣಯವನ್ನೂ ಮಾಡಿದ್ದರು. ಮರಳುಗಾರಿಕೆಯಿಂದ ದೈವಸಾನಿಧ್ಯ ನಾಶ ಮತ್ತು ಪ್ರಕೃತಿ ನಾಶವಾದ ಕಾರಣ ಊರವರು ಮರಳುಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಸಂಬಂಧಪಟ್ಟ ಕಾಣಿಯೂರು ಗ್ರಾಮ ಪಂಚಾಯತಿಗೂ ಮನವಿ ಸಲ್ಲಿಸಿ ಇಲಾಖೆಗಳಿಗೆಲ್ಲ ಮರಳುಗಾರಿಕೆ ನಡೆಸದಂತೆ ಪತ್ರ ಬರೆದಿದ್ದರು.