ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಪಘಾತ

ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ: ಕುಂದಾಪುರದ ಯೋಧ ಅನೂಪ್ ಮೃತ್ಯು

Published

on

ಕುಂದಾಪುರ:ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಟ್ರಕ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಮೃತಪಟ್ಟವರಲ್ಲಿ ಕುಂದಾಪುರದ ಬೀಜಾಡಿಯ ಅನೂಪ್ ಪೂಜಾರಿ (31) ಕೂಡಾ ಒಬ್ಬರಾಗಿದ್ದಾರೆ.

ಅಪಘಾತದಲ್ಲಿ ಒಟ್ಟು ಐವರು ಮೃತಪಟ್ಟಿದ್ದು, ಅವರಲ್ಲಿ ಅನೂಪ್ ಪೂಜಾರಿ ಸೇರಿದಂತೆ ಮೂವರು ಯೋಧರು ಕರ್ನಾಟಕದವರು ಎಂದು ತಿಳಿದುಬಂದಿದೆ.
ಅನೂಪ್ ಪೂಜಾರಿ ಸೇನೆಗೆ ಸೇರಿ 13 ವರ್ಷಗಳಾಗಿದ್ದು, ಅವರು ಮರಾಠ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ವಿವಾಹಿತರಾಗಿರುವ ಅನೂಪ್ ಪತ್ನಿ, 2 ವರ್ಷದ ಹೆಣ್ಣು ಮಗು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ರಜೆ ಮುಗಿಸಿ ಮೂರು ದಿನಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ತೆರಳಿದ್ದ ಅನೂಪ್

ಅನೂಪ್ ಅವರು ಕಳೆದ ತಿಂಗಳು ರಜೆಯಲ್ಲಿ ಊರಿಗೆ ಆಗಮಿಸಿದ್ದವರು ಡಿ.21ರಂದು ಕರ್ತವ್ಯಕ್ಕೆ ಮತ್ತೆ ತೆರಳಿದ್ದರು.

 

ಊರಲ್ಲಿದ್ದ ವೇಳೆ ಡಿ.15ರಂದು ಕೋಟೇಶ್ವರದಲ್ಲಿ ನಡೆದ ‘ಕೊಡಿ ಹಬ್ಬ’ದಲ್ಲೂ ಪಾಲ್ಗೊಂಡಿದ್ದ ಅನೂಪ್, ಇತ್ತೀಚೆಗೆ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು.

ಡಿ.26ರಂದು ಅಂತ್ಯ ಸಂಸ್ಕಾರ

ನಾಳೆ (ಡಿ.26) ತೆಕ್ಕಟ್ಟೆಯಿಂದ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಸೈನಿಕ ಅನೂಪ್ ಪೂಜಾರಿಯವರೊಂದಿಗೆ ಸೇವೆಯಲ್ಲಿ ಜೊತೆಗಿದ್ದು ಸದ್ಯ ರಜಾದಲ್ಲಿ ಊರಾದ ಹಳಿಯಾಳಕ್ಕೆ ಬಂದಿದ್ದ ಯೋಧ ಆಂಜನೇಯ ಪಾಟೀಲ್ ಇಂದು ಬೆಳಗ್ಗೆ ಮೃತ ಯೋಧ ಅನೂಪ್ ಮನೆಗೆ ಆಗಮಿಸಿ ನಿಧನರಾಗಿರುವ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಮನೆಯಲ್ಲಿ ಕುಟುಂಬಿಕರ ಆಕ್ರಂದನ ಮುಗಿಲುಮುಟ್ಟಿದೆ.
ಘಟನೆ ಹಿನ್ನೆಲೆ:
ಮಂಗಳವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನವು ರಸ್ತೆಯಿಂದ 300ರಿಂದ 350 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಸೇನಾ ವಾಹನಲ್ಲಿ ಒಟ್ಟು 18 ಯೋಧರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಪೈಕಿ ಐವರು ಯೋಧರು ಮೃತಟ್ಟಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version