Published
3 days agoon
By
Akkare Newsಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಂಗ್ರಹಿಸಿಟ್ಟಿದ್ದ 2.25 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ಟ್ಯಾಟೂ ಕಲಾವಿದನೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.
ಯಲಹಂಕದ ರಕ್ಷಿತ್(31) ಬಂಧಿತ ಆರೋಪಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ತವನೀಶ್ ಅಲಿಯಾಸ್ ಈಶಾ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರಕ್ಷಿತ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, 3.55 ಕೆ.ಜಿ. ಹೈಡ್ರೋ ಗಾಂಜಾ, 16.65 ಕೆ.ಜಿ. ಗಾಂಜಾ, 40 ಎಲ್‌ಎಸ್‌ಡಿ ಸ್ಟ್ರಿಪ್‌ಗಳು ಮತ್ತು 130 ಗ್ರಾಂ ಚರಸ್ ಸೇರಿದಂತೆ 2.5 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ತಲೆಮರೆಸಿಕೊಂಡಿರುವ ಯಲಹಂಕದ ನಿವಾಸಿ ತವನೀಶ್ ಎಂಬಾತ ರಕ್ಷಿತ್ ಜೊತೆ ಸೇರಿ ಬೇರೆ ರಾಜ್ಯಗಳಿಂದ ಹಾಗೂ ಥಾಯ್ಲೆಂಡ್‌ನಿಂದ ಈ ಮಾದಕ ದ್ರವ್ಯಗಳನ್ನು ತರಿಸಿಕೊಂಡಿದ್ದ ಎನ್ನಲಾಗಿದೆ. ಇವರಿಬ್ಬರು ಹೊಸ ವರ್ಷದ ಸಂಭ್ರಮಾಚರಣೆಯ ಸಿದ್ಧತೆಗಾಗಿ ಡ್ರಗ್ಸ್ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲ್ಲದೆ, ನಗರದಾದ್ಯಂತ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪೊಲೀಸರು 17 ಆರೋಪಿಗಳನ್ನು ಬಂಧಿಸಿ 13 ಲಕ್ಷ ರೂಪಾಯಿ ಮೌಲ್ಯದ 30 ಕೆ.ಜಿ. ಗಾಂಜಾ ಮತ್ತು 9.5 ಲಕ್ಷ ರೂಪಾಯಿ ಮೌಲ್ಯದ 150 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ..