Published
14 hours agoon
By
Akkare Newsಸಹಕಾರ ಪ್ರತಿಯೊಬ್ಬರ ಏಳಿಗೆಗೆ ಮೂಲ ಸ್ಫೂರ್ತಿ. ಮಾತ್ಸರ್ಯ, ದ್ವೇಷ ಬಿಟ್ಟು ಪರಸ್ಪರ ಸಹಕಾರದಲ್ಲಿ ತೊಡಗಿಸಿಕೊಂಡಾಗ ಎಲ್ಲರಿಗೂ ಒಳಿತಾಗುತ್ತದೆ ಎಂದು ಉಡುಪಿ ಕಾಣಿಯೂರು ರಾಮತೀರ್ಥ ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಕಾಣಿಯೂರಿನ ರಾಮತೀರ್ಥಮಠದ ಜಾತ್ರಾ ಮೈದಾನದಲ್ಲಿ ಸೋಮವಾರ ನಡೆದ ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ, ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆಮಾಡಿ ಮಾತನಾಡಿದರು.
ಸಹಕಾರ ಪ್ರತಿಯೊಬ್ಬರ ಮನ ಮತ್ತು ಮನೆಯಲ್ಲಿ ಇರಬೇಕು. ಹಾಗಾದರೆ ಮಾತ್ರ ನಾಡು, ದೇಶ ಸುಸ್ಥಿರವಾಗಿರಲು ಸಾಧ್ಯ. ಬದುಕಿನಲ್ಲಿ ಚೆನ್ನಾಗಿದ್ದೇವೆ, ಸುಖವಾಗಿದ್ದೇವೆ ಎಂದರೆ ಅದಕ್ಕೆ ಬೆವರು ಸುರಿಸಿ ದುಡಿಯುವ ಕೃಷಿಕರು ಮತ್ತು ದೇಶ ರಕ್ಷಣೆ ಮಾಡುವ ಸೈನಿಕರು ಕಾರಣ. ಹಾಗಾಗಿ ಕೃಷಿಕರ ಮತ್ತು ಸೈನಿಕರ ಸ್ಮರಣೆ ಮಾಡಬೇಕು. ಅವರ ಏಳಿಗೆಗಾಗಿ ನಾವು ಸಹಕಾರ ನೀಡಬೇಕು ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕ್ಯಾಷ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಅವಿಭಜಿತ ದ.ಕ.ಜಿಲ್ಲೆ ಬ್ಯಾಂಕಿಂಗ್ ಮತ್ತು ಸಹಕಾರ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಹಕಾರ ಕ್ಷೇತ್ರವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲು ಒತ್ತು ನೀಡಿದ್ದಾರೆ. ಭಾರತದ ಆರ್ಥಿಕತೆಯನ್ನು ಸುಸ್ಥಿರತೆಗೆ ತರುವ ಜತೆಗೆ ಸಮಾಜವನ್ನು ಗಟ್ಟಿಗೊಳಿಸುವ ಮೂಲಕ ಸುಸ್ಥಿರ ಸಮಾಜ, ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಒಂದಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಸದಸ್ಯರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆಗೆ ಚಾಲನೆ ನೀಡಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳಿಗೆ ಪುನಶ್ಚೇತನ ನೀಡುವ ಕಾರ್ಯವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾಡಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್.ಉದನಡ್ಕ ಅಧ್ಯಕ್ಷತೆ ವಹಿಸಿದ್ದರು.
ನೂತನ ಕಚೇರಿ ಕಟ್ಟಡವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಲ್ಯೊಟ್ಟು, ನೂತನ ಗೋದಾಮು ಕಟ್ಟಡವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಂಪರ್ಕ ರಸ್ತೆಯನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು ಉದ್ಘಾಟಿಸಿದರು.
ಮುಖಂಡ ಎಸ್.ಅಂಗಾರ, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್, ವಕೀಲ ಮೋಹನ ಗೌಡ ಇಡ್ಯಡ್ಕ, ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತಕುಮಾರ್ ಬೈಲಂಗಡಿ, ವಿಶ್ವನಾಥ ಕೂಡಿಗೆ, ಸುಂದರ ಗೌಡ ದೇವಸ್ಯ, ಪರಮೇಶ್ವರ ಅನಿಲ, ವೀಣಾ ಅಂಬುಲ, ರತ್ನಾವತಿ ಮುದ್ವ, ಲೋಕೇಶ್ ಗೌಡ ಆತಾಜೆ, ರಮೇಶ್ ಉಪ್ಪಡ್ಕ, ಶೀಲಾವತಿ ಮುಗರಂಜ, ದಿವಾಕರ ಮರಕ್ಕಡ, ವಲಯ ಮೇಲ್ವಿಚಾರಕ ವಸಂತ ಎಸ್ ಭಾಗವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಪಿ. ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ನಿರೂಪಿಸಿದರು.
ಸಂಘದ ಸ್ಥಾಪಕ ಸದಸ್ಯರನ್ನು, ಸ್ಥಳ ದಾನಿಗಳನ್ನು, ಸಂಘದ ಮಾಜಿ ಅಧ್ಯಕ್ಷರನ್ನು, ಸಂಘದ ನಿವೃತ್ತ ಸಿಬ್ಬಂದಿಯನ್ನು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
₹ 3 ಕೋಟಿ ವೆಚ್ಚದ ಕಟ್ಟಡ: ಸಂಘವು 13 ವರ್ಷಗಳಿಂದ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ಬಾರಿ ಸಂಘದ ಎಲ್ಲ ಸದಸ್ಯರು ಲಭಿಸಿರುವ ₹ ರೂ.20 ಲಕ್ಷ ಡಿವೆಡೆಂಡ್ ಹಣವನ್ನು ಸಂಘಕ್ಕೆ ನೀಡಿ ಸಂಘಕ್ಕೆ ಜಾಗ ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪೈಕಿ ₹ 18 ಲಕ್ಷದಲ್ಲಿ 3 ಸೆಂಟ್ಸ್ ಜಾಗ ಖರೀದಿಸಲಾಗಿದೆ. ಈ ಹಿಂದೆ ದಾನಿಯೊಬ್ಬರು ದಾನವಾಗಿ ನೀಡಿದ್ದ ಜಾಗವೂ ಸೇರಿದಂತೆ ಸಂಘದ ಹೆಸರಿನಲ್ಲಿರುವ ಜಾಗದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ದಾನಿಗಳ ನೆರವು ಪಡೆದು ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಣೇಶ್ ಕೆ.ಎಸ್.ಉದನಡ್ಕ ತಿಳಿಸಿದರು.