Published
2 months agoon
By
Akkare Newsರಾಜ್ಯ ಸರಕಾರ ಮೈಕ್ರೋ ಫೈನಾನ್ಸ್ ಕಿರುಕುಳ ನೀಡುವುದು ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ. ವಿಕಾಸಸೌಧದಲ್ಲಿ ಸೋಮವಾರದಂದು ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು ಮೈಕ್ರೋ ಫೈನಾನ್ಸ್ ಕಂಪನಿಗಳು 59 ಸಾವಿರ ಕೋಟಿ ಸಾಲ ನೀಡಿದೆ. ಇವರು ಆರ್‌ಬಿಐ ಗೈಡ್ಲೈನ್ಸ್ ಉಲ್ಲಂಘಿಸಿ ಸಾಲ ನೀಡುತ್ತಿದ್ದು, ಸಾಲ ಪಡೆದವರ ಆರ್ಥಿಕ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಬ್ಬ ವ್ಯಕ್ತಿಗೆ ಎರಡು ಲಕ್ಷಕ್ಕಿಂತ ಜಾಸ್ತಿ ಸಾಲ ನೀಡಬಾರದು ಎಂದು ಆರ್‌ಬಿಐ ಗೈಡ್‌ಲೈನ್ಸ್. ಆದರೆ ಐದರಿಂದ ಆರು ಲಕ್ಷ ರೂ ಸಾಲ ನೀಡಲಾಗುತ್ತಿದ್ದು, ಯಾರೂ ನಿಯಮ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಬಡವರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ. ಸಾಲ ಮರುಪಾವತಿ ಮಾಡದೇ ಹೋದರೆ ಮೈಕ್ರೋಫೈನಾನ್ಸ್ ಕಂಪನಿಗಳ ಅಸ್ತಿತ್ವಕ್ಕೆ ಕೂಡಾ ತೊಂದರೆ ಉಂಟಾಗಲಿದೆ. ಸಾಲ ವಸೂಲಾತಿಗೆ ಕೂಡಾ ಆರ್‌ಬಿಐ ನಿಗದಿ ಮಾಡಿರುವ ಮಾದರಿ ಕಾರ್ಯಚಾರಣೆ ಪಾಲನೆ ಮಾಡಲು ಸೂಚನೆ ನೀಡಿದರು.
ಕೇಂದ್ರ ಸರಕಾರ ಈ ಕುರಿತು ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡಿಲ್ಲ. ಆದರೆ ರಾಜ್ಯ ಸರಕಾರ ತನ್ನ ಅಧಿಕಾರದ ಮಿತಿಯಲ್ಲಿ ಬೇರೆ ಬೇರೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್‌ಗಳ ಅಕ್ರಮಗಳಿಗೆ ಕಡಿವಾಣ ಹಾಕಲಿದೆ. ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಈ ಘಟನೆಗಳಿಗೆ ರಾಜ್ಯ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.