Published
2 months agoon
By
Akkare Newsಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ತಮಿಳು ಚಿತ್ರನಟ ವಿಶಾಲ್ ಅವರು ಬುಧವಾರ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರ ಆರೋಗ್ಯ ಸುಧಾರಿಸಲಿದೆ ಎಂಬ ಅಭಯ ವನ್ನು ದೈವ ನೀಡಿದೆ. ವಿಶಾಲ್ ಅವರು ಮುಂದಿನ ವರ್ಷ ಬಂದು ತುಲಾಭಾರ ಸೇವೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದಾರೆ.
ಸಂಡೈಕೋಳಿ, ತಿಮಿರು, ಪಾಂಡಿಯ ನಾಡು, ಪೂಜೈ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ವಿಶಾಲ್ ಅವರು ಕಳೆದ ಜನವರಿಯಲ್ಲಿ ಚೆನ್ನೈಯಲ್ಲಿ ನಡೆದ ಮದಗಜ ರಾಜ ಸಿನೆಮಾದ ಪತ್ರಿಕಾಗೋಷ್ಠಿಯಲ್ಲಿ ಮೈಕ್ ಕೈಯಲ್ಲಿ ಹಿಡಿಯಲಾಗದಷ್ಟು ಸೋತುಹೋಗಿದ್ದರು. ಮಾತನಾಡಲೂ ಅಗುತ್ತಿರಲಿಲ್ಲ. ವೈರಲ್ ಫಿವರ್‌ನಿಂದ ಹೀಗಾಗಿದೆ ಎಂದು ಹೇಳಿದ್ದರೂ ಅವರ ಆರೋಗ್ಯ ಹದಗೆಟ್ಟ ಬಗ್ಗೆ ವರದಿಗಳಿದ್ದವು.
ಈ ನಡುವೆ ಮಂಗಳವಾರ ಅವರು ಕೊಲ್ಲೂರು ಮತ್ತು ಉಡುಪಿ ದೇಗುಲಕ್ಕೆ ಭೇಟಿ ನೀಡಿದ್ದರು. ಇದರ ನಡುವೆ ಅವರು ಕಾರಣಿಕ ದೈವವೆಂದೇ ಹೆಸರಾದ ಪಕ್ಷಿಕೆರೆ ಹರಿಪಾದೆಯ ಜಾರಂದಾಯ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಎಂದು ಕ್ಷೇತ್ರದ ವ್ಯವಸ್ಥಾಪಕ ಅಶ್ವಿನ್ ಶೇಖ್ ತಿಳಿಸಿದ್ದಾರೆ.
ಪ್ರಾರ್ಥನೆ ಸಲ್ಲಿಸಿದ ವಿಶಾಲ್
ವಿಶಾಲ್ ಮಂಗಳವಾರ ರಾತ್ರಿ ಸುಮಾರು 10.30ರ ಹೊತ್ತಿಗೆ ಕುಟುಂಬ ಸಮೇತ ದೈವಸ್ಥಾನಕ್ಕೆ ಆಗಮಿಸಿದರು. ಅಷ್ಟು ಹೊತ್ತಿಗೆ ಕ್ಷೇತ್ರದಲ್ಲಿ ಗಗ್ಗರ ಸೇವೆಗೆ ಅಣಿಯಾಗುತ್ತಿತ್ತು. ಕೈಯಲ್ಲಿ ಮಲ್ಲಿಗೆ ಚೆಂಡು ಹಿಡಿದಿದ್ದ ವಿಶಾಲ್ ಅವರು ಭಕ್ತಿಯಿಂದ ಗಗ್ಗರ ಸೇವೆಯನ್ನು ವೀಕ್ಷಿಸಿದರು. ಬಳಿಕ ಅವರನ್ನು ಕೊಡಿಯಡಿಗೆ ಕರೆಯಲಾಯಿತು. ಈ ವೇಳೆ ಅವರು ತಮ್ಮ ಆರೋಗ್ಯ ವೃದ್ಧಿಗಾಗಿ ಅನುಗ್ರಹ ಕೋರಿ ಬಂದಿರುವುದಾಗಿ ಹೇಳಿ ಆಶೀರ್ವಾದ ಬಯಸಿದರು. ಈ ನಡುವೆ ದೈವ ಜೀಟಿಗೆ ಮರ್ಯಾದೆಯೊಂದಿಗೆ ಅಭಯ ನೀಡಿತು.
ಇತ್ತ ಅರ್ಚಕರು, ಕ್ಷೇತ್ರದ ತುಲಾಭಾರ ಸೇವೆಯು ಭಾರಿ ಕಾರಣಿಕದ್ದಾಗಿದ್ದು, ನೀವು ಆರೋಗ್ಯವಂತರಾಗಿ ಬಂದು ಮುಂದಿನ ವರ್ಷ ತುಲಾಭಾರ ಸೇವೆ ಕೊಡಿಸಿ ಎಂದು ಸಲಹೆ ನೀಡಿದರು. ವಿಶಾಲ್ ಅವರು ಅದಕ್ಕೆ ಒಪ್ಪಿ ಮುಂದಿನ ವರ್ಷ ಬರುವುದಾಗಿ ಹೇಳಿದರು. ರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಅವರು ನಿರ್ಗಮಿಸಿದರು. ವಿಶಾಲ್ ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.