Published
14 hours agoon
By
Akkare Newsಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಗಳಾದ ಗ್ಲೋಬಲ್ ಟೈಮ್ಸ್ ಮತ್ತು ಕ್ಸಿನ್ಹುವಾ ಹಾಗೂ ಟರ್ಕಿಯ ಸಾರ್ವಜನಿಕ ಪ್ರಸಾರಕ ಟಿಆರ್‌ಟಿ ವರ್ಲ್ಡ್‌ನ ಎಕ್ಸ್ ಖಾತೆಗಳನ್ನು ಭಾರತ ಬುಧವಾರ ನಿರ್ಬಂಧಿಸಿದೆ. ಭಾರತ ಸರ್ಕಾರದ ಕಾನೂನು ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಅವರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಹೇಳಿದೆ.
ಮೇ 7 ರಂದು, ಭಾರತ ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿದ ಗಂಟೆಗಳ ನಂತರ, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಗ್ಲೋಬಲ್ ಟೈಮ್ಸ್‌ನ ಪೋಸ್ಟ್ ಅನ್ನು “ಆಧಾರರಹಿತ” ಎಂದು ಕರೆದು ಫ್ಯಾಕ್ಟ್‌ಚೆಕ್ ಮಾಡಿತ್ತು.
“ಹಲವಾರು ಪಾಕಿಸ್ತಾನ ಪರ ಹ್ಯಾಂಡಲ್‌ಗಳು ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಆಧಾರರಹಿತ ಹೇಳಿಕೆಗಳನ್ನು ಹರಡುತ್ತಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಮಾಧ್ಯಮ ಸಂಸ್ಥೆಗಳು ಮೂಲಗಳನ್ನು ಪರಿಶೀಲಿಸದೆ ಅಂತಹ ಮಾಹಿತಿಯನ್ನು ಹಂಚಿಕೊಂಡಾಗ, ಅದು ಜವಾಬ್ದಾರಿಯುತ ಪತ್ರಿಕೋದ್ಯಮ ನೀತಿಶಾಸ್ತ್ರದಲ್ಲಿನ ಗಂಭೀರ ಲೋಪವನ್ನು ಪ್ರತಿಬಿಂಬಿಸುತ್ತದೆ.” ಎಂದು ರಾಯಭಾರ ಕಚೇರಿ ಹೇಳಿದೆ.
ಚೀನಾದಿಂದ ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣ
ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣಕ್ಕೆ ಚೀನಾ ಮಾಡಿದ ಹೊಸ ಪ್ರಯತ್ನಗಳನ್ನು ಭಾರತ ಬುಧವಾರ ತಿರಸ್ಕರಿಸಿದೆ. ಇದನ್ನು “ಅಸಂಬದ್ಧ” ಪ್ರಯತ್ನ ಎಂದು ಹೇಳಿರುವ ಭಾರತ, ಈಶಾನ್ಯ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಈಗಲೂ ಆಗಿದ್ದು ಮತ್ತು ಮುಂದೆಯೂ ಅದು ಭಾರತದ್ದೆ ಆಗಿರುತ್ತದೆ ಎಂದು ಹೇಳಿದೆ.
2024ರ ಏಪ್ರಿಲ್ ತಿಂಗಳ ವೇಳೆ ಚೀನಾ ಅರುಣಾಚಲ ಪ್ರದೇಶದ 30 ಸ್ಥಳಗಳಿಗೆ ಪ್ರಮಾಣೀಕೃತ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ವೇಳೆ ಕೂಡಾ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.
ಅದಕ್ಕೂ ಮೊದಲು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು 2017 ರಲ್ಲಿ ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಪ್ರಮಾಣೀಕೃತ ಹೆಸರುಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ನಂತರ 2021 ರಲ್ಲಿ 15 ಸ್ಥಳಗಳ ಎರಡನೇ ಪಟ್ಟಿಯನ್ನು ಮತ್ತು 2023 ರಲ್ಲಿ 11 ಸ್ಥಳಗಳನ್ನು ಹೆಸರಿಸಿದ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು ಎಂದು ದಿ ಹಿಂದೂ ವರದಿ ಮಾಡಿದೆ.
ಚೀನಾವು ಅರುಣಾಚಲ ಪ್ರದೇಶದ ಹೆಚ್ಚಿನ ಭಾಗವು ತಮ್ಮದು ಎಂದು ವಾದಿಸುತ್ತದೆ. ಅದು ರಾಜ್ಯವನ್ನು “ದಕ್ಷಿಣ ಟಿಬೆಟ್” ಎಂದು ಹೇಳಿಕೊಳ್ಳುತ್ತದೆ. ಅದಾಗ್ಯೂ, ಭಾರತ ಈ ಪ್ರತಿಪಾದನೆಗಳನ್ನು ತಿರಸ್ಕರಿಸಿದೆ.