Published
5 months agoon
By
Akkare News
ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯು ಮೋದಿ ಸರ್ಕಾರದ ‘ಭ್ರಷ್ಟ’ ಮತ್ತು ‘ಅಸಮರ್ಥ’ ಆಡಳಿತದ ಅಂತ್ಯದ ಆರಂಭ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ (ಸೆ.24) ಹೇಳಿದರು.
ಪಾಟ್ನಾದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಬಿಹಾರದ ರಾಜಕೀಯ ಸನ್ನಿವೇಶದ ಕುರಿತು ಪ್ರತಿಕ್ರಿಯಿಸಿದ ಖರ್ಗೆ ಅವರು, ಆಡಳಿತಾರೂಢ ಎನ್ಡಿಎಯೊಳಗಿನ ಬಿರುಕನ್ನು ಎತ್ತಿ ತೋರಿಸಿದರು. ಆಂತರಿಕ ಕಲಹ ಈಗ ಬಹಿರಂಗವಾಗಿದೆ ಎಂದರು.

ಬಿಜೆಪಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ನೋಡುತ್ತಿದೆ. ಬಿಹಾರದ ಜನರು ಬಿಜೆಪಿಯ ವಿಭಜಕ ಕಾರ್ಯಸೂಚಿಯನ್ನು ತಿರಸ್ಕರಿಸುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕು, ಧಾರ್ಮಿಕ ಧ್ರುವೀಕರಣವಲ್ಲ ಎಂದು ಖರ್ಗೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಖರ್ಗೆ ಅವರು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ರಂಗಗಳಲ್ಲಿ ಇವರು ದೇಶವನ್ನು ವಿಫಲಗೊಳಿಸಿದ್ದಾರೆ ಎಂದು ಆರೋಪಿಸಿದರು.


ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಭಾರತವು ಅತ್ಯಂತ ಸವಾಲಿನ ಅವಧಿಯನ್ನು ಎದುರಿಸುತ್ತಿದೆ, ರಾಜತಾಂತ್ರಿಕ ತಪ್ಪು ಹೆಜ್ಜೆಗಳು ಮತ್ತು ದೇಶೀಯ ಪ್ರಕ್ಷುಬ್ಧತೆಗಳು ಮೋದಿ ಅವಧಿಯಲ್ಲಿ ‘ಆಡಳಿತದ ಸಂಪೂರ್ಣ ವೈಫಲ್ಯ’ವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮಸ್ಯೆಗಳು ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ರಾಜತಾಂತ್ರಿಕ ವೈಫಲ್ಯದ ಪರಿಣಾಮವಾಗಿದೆ. ಪ್ರಧಾನಿಯವರು ‘ನನ್ನ ಸ್ನೇಹಿತ’ ಎಂದು ಹೆಮ್ಮೆಪಟ್ಟವರು ಇಂದು ಭಾರತವನ್ನು ಹಲವು ಸಮಸ್ಯೆಗಳಿಗೆ ಸಿಲುಕಿಸುತ್ತಿದ್ದಾರೆ ಎಂದರು.



