Connect with us

ರಾಜಕೀಯ

ಇಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಗೆಲುವಿನ ಬಿ‘ಹಾರ’ ಎನ್​ಡಿಎಗಾ, ಮಹಾಘಟಬಂಧನಕ್ಕಾ?

Published

on

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನ ಆಗಿದ್ದೇ ಆಗಿದ್ದು, ಫಲಿತಾಂಶದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಆರ್​​ಜೆಡಿ ಮತ್ತು ಜೆಡಿಯು ನಾಯಕರ ಮಧ್ಯೆ ಪೋಸ್ಟರ್ ಸಮರ ಶುರುವಾಗಿದ್ದು, ಪರಸ್ಪರ ವ್ಯಂಗ್ಯ ಮಾಡುವ ಮೂಲಕ ಕಾಲೆಳೆಯುತ್ತಿದ್ದಾರೆ. ಮತ ಎಣಿಕೆ ಇಂದು ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಚಿತ್ರಣ ಸಿಗುವ ನಿರೀಕ್ಷೆ ಇದೆ.

ಪಟ್ನಾ, ನವೆಂಬರ್ 14: 38 ಜಿಲ್ಲೆಗಳು, 243 ಕ್ಷೇತ್ರಗಳು, 2,600ಕ್ಕೂ ಹೆಚ್ಚು ಅಭ್ಯರ್ಥಿಗಳು. ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ದೇಶದ ದಿಕ್ಸೂಚಿ ಎಂದೇ ಕರೆಯಲ್ಪಡುವ ಬಿಹಾರ ಗೆಲುವಿನ ಹಾರ ಯಾರಿಗೆ ಎನ್ನುವ ಕುತೂಹಲ ರಾಷ್ಟ್ರ ರಾಜಕಾರಣದಲ್ಲಿ ಸೃಷ್ಟಿಯಾಗಿದೆ. ಮತ್ತೆ ನಿತೀಶ್ ಆಡಳಿತ ಮುಂದುವರೆಯುತ್ತಾ? ಇಲ್ಲ ಮತದಾರ ಈ ಬಾರಿ ಬದಲಾವಣೆಯನ್ನು ಬಯಲಿಸಿದ್ದಾನಾ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

ಬಿಹಾರದ 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿದೆ. ಈ ಬಾರಿಯಂತೂ ಬಿಹಾರದ ಜನ ದಾಖಲೆಯ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಇದರಲ್ಲಿ ಮಹಿಳಾ ಮತದಾರರದ್ದು ಮೇಲುಗೈ. ಹೀಗಾಗಿ ಫಲಿತಾಂಶ ಕುತೂಹಲ ಕೆರಳುವಂತೆ ಮಾಡಿದೆ. ಎನ್​ಡಿಎ ಗೆದ್ದು ನಿತೀಶ್ ಮತ್ತೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದ್ದರೆ, ಮಹಾಘಟಬಂಧನದ ಯುವ ನಾಯಕ ತೇಜಸ್ವಿ ಯಾದವ್, ಗೆಲುವಿನ ಭಾಗ್ಯಕ್ಕೆ ಎದುರು ನೋಡುತ್ತಿದ್ದಾರೆ.

ಎನ್​ಡಿಎಗೆ ಗೆಲುವು ಎಂದಿರುವ ಎಕ್ಸಿಟ್​ಪೋಲ್​ಗಳು

ಮತದಾನೋತ್ತರ ಸಮೀಕ್ಷೆಗಳು ಎನ್​ಡಿಎ ಸರ್ಕಾರ ರಚನೆ ಆಗುವ ಬಗ್ಗೆ ಭವಿಷ್ಯ ನುಡಿದಿವೆ. ಹೀಗಾಗಿಯೇ ಜೆಡಿಯು ಸೇರಿ ಬಿಜೆಪಿ ಮಿತ್ರಪಕ್ಷಗಳಲ್ಲಿ ಸಂಭ್ರಮ ಈಗಾಗಲೇ ಮನೆ ಮಾಡಿದೆ.

ಜೆಡಿಯು, ಆರ್​ಜೆಡಿ ಮಧ್ಯೆ ಪೋಸ್ಟರ್ ಸಮರ

ಏತನ್ಮಧ್ಯೆ, ಪಾಟ್ನಾದ ಜೆಡಿಯು ಕಚೇರಿಯ ಹೊರಗೆ ‘ಟೈಗರ್ ಅಭಿ ಜಿಂದಾ ಹೇ’, ಅಂದರೆ ಹುಲಿ ಇನ್ನೂ ಜೀವಂತವಾಗಿದೆ ಎನ್ನುವ ಪೋಸ್ಟರ್​ಗಳು ರಾರಾಜಿಸುತ್ತಿವೆ. ಭರ್ಜರಿ ಗೆಲುವಿನ ವಿಶ್ವಾಸದಲ್ಲಿರುವ ಜೆಡಿಯು ಕಾರ್ಯಕರ್ತರು, ಸಂಭ್ರಮಾಚರಣೆಯ ತಯಾರಿಯಲ್ಲಿದ್ದಾರೆ. ಇದಕ್ಕೆ RJDಯ ಬೆಂಬಲಿತ ಸಮಾಜವಾದಿ ಪಕ್ಷ ಕೌಂಟರ್ ಕೊಟ್ಟಿದೆ. ‘ಅಲ್ವಿದಾ ಚಾಚಾ’ ಅಂದರೆ ಬಾಯ್ ಬಾಯ್ ಚಿಕ್ಕಪ್ಪ ಎನ್ನುವ ಮೂಲಕ ನಿತೀಶ್ ಕುಮಾರ್ ಕಾಲೆಳೆದಿದೆ.

ಇನ್ನು ಜೆಡಿಯುನ ಬಾಹುಬಲಿ ಎಂದೇ ಕರೆಸಿಕೊಳ್ಳುವವರು ಅನಂತ್ ಕುಮಾರ್ ಸಿಂಗ್. ಇಚರು 20ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾರೆ. ಆದರೂ ಜೈಲಿನಿಂದ್ಲೇ ಪಟ್ನಾದ ಮೊಕಾಮಾ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ. ಇವರ ಬೆಂಬಲಿಗರಂತೂ ಈಗಾಗಲೇ ಸಂಭ್ರಮಾಚರಣೆಗೆ ತಯಾರಿ ನಡೆಸಿದ್ದಾರೆ.

ಮತ್ತೊಂದೆಡೆ, ಮತದಾನೋತ್ತರ ಸಮೀಕ್ಷೆ ಸುಳ್ಳಾಗುತ್ತದೆ, ನಾವೇ ಗೆಲ್ಲುತ್ತೇವೆ ಎಂದು ಮಹಾಘಟಬಂಧನ ನಾಯಕರು ಹೇಳುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ನವೆಂಬರ್ 6 ಮತ್ತು ನವೆಂಬರ್ 11, ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

Continue Reading
Click to comment

Leave a Reply

Your email address will not be published. Required fields are marked *

Advertisement