Published
2 months agoon
By
Akkare News
ಬೆಂಗಳೂರು : ಜ.22 ರಿಂದ 31ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ.22 ರಿಂದ ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣ ಮತ್ತು ನರೇಗಾ ಯೋಜನೆ ಬದಲಾವಣೆಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಅಧಿವೇಶನದ ನಂತರ ಆಯವ್ಯಯದ ಸಿದ್ಧತೆ ಪ್ರಾರಂಭಿಸಲಾಗುವುದು ಎಂದರು.
ಅಧಿವೇಶನ ಬಳಿಕ ಆಯವ್ಯಯ ಸಿದ್ಧತೆ
ಅಧಿವೇಶನ ಮುಕ್ತಾಯವಾದ ನಂತರ ರಾಜ್ಯ ಬಜೆಟ್ (ಆಯವ್ಯಯ) ಸಿದ್ಧತೆ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. “ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳು ಬಜೆಟ್ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಉದ್ಯೋಗ ಭದ್ರತೆ ಸಂಬಂಧಿತ ಯೋಜನೆಗಳ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ” ಎಂದು ಅವರು ಸ್ಪಷ್ಟಪಡಿಸಿದರು. ರಾಜಕೀಯ ಹಾಗೂ ಆಡಳಿತದ ದೃಷ್ಟಿಯಿಂದ ಈ ಜಂಟಿ ಅಧಿವೇಶನವು ನರೇಗಾ ಯೋಜನೆಯ ಭವಿಷ್ಯ, ಗ್ರಾಮೀಣ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಕಾರ್ಯಗಳ ದಿಕ್ಕು, ಮುಂದಿನ ಬಜೆಟ್‌ಗೆ ಪೂರ್ವಭಾವಿ ಚರ್ಚೆ ಇವುಗಳ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಅಧಿವೇಶನದಲ್ಲಿ ಪ್ರತಿಪಕ್ಷಗಳ ಪಾತ್ರ ಹಾಗೂ ಚರ್ಚೆಗಳ ಮೇಲೆ ರಾಜ್ಯದ ರಾಜಕೀಯ ಗಮನ ಕೇಂದ್ರೀಕೃತವಾಗಲಿದೆ. ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ರದ್ದು ಮಾಡಿ, ಕೋಟ್ಯಂತರ ಬಡಜನರಿಗೆ ಉದ್ಯೋಗದ ಖಾತರಿಯೂ ಇಲ್ಲದ, ಮಹಾತ್ಮ ಗಾಂಧಿಯವರ ಹೆಸರಿನ ನೈತಿಕ ಬಲವೂ ಇಲ್ಲದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿ ಮಾಡುತ್ತಿರುವುದು ಗ್ರಾಮೀಣ ಭಾರತದ ಆರ್ಥಿಕತೆಗೆ ನೀಡುತ್ತಿರುವ ಕೊಡಲಿಯೇಟು. ಈಗ ಈ ಅನ್ಯಾಯದ ವಿರುದ್ಧ ಧ್ವನಿಯೆತ್ತದೆ ಸುಮ್ಮನಾದರೆ ಮುಂದೆ ಕರಾಳ ದಿನಗಳನ್ನು ಎದುರಿಸಲು ದೇಶ ಸಿದ್ಧವಾಗಬೇಕಿದೆ ಎಂದು ಸಿದ್ದರಾಮಯ್ಯ ಈ ಹಿಂದೆಯೂ ಎಚ್ಚರಿಸಿದ್ದರು.





