Connect with us

ಸ್ಥಳೀಯ

ಮೆಕ್ಕಾ ಮೇಲೆಯೇ ಹೌತಿಗಳ ಕಣ್ಣು: ಇತಿಹಾಸದಲ್ಲೇ ಮೊದಲ ಬಾರಿಗೆ ಪವಿತ್ರ ನಗರದಲ್ಲಿ ಸೈರನ್ ಶಬ್ದ, ಡ್ರೋನ್ ಹೊಡೆದುರುಳಿಸಿ ಸೌದಿ ಕಠಿಣ ಎಚ್ಚರಿಕೆ!

Published

on

ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರ ಮೆಕ್ಕಾ ನಗರವನ್ನು ಗುರಿಯಾಗಿಸಿಕೊಂಡು ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸಶಸ್ತ್ರ ಡ್ರೋನ್ ದಾಳಿಗೆ ಯತ್ನಿಸಿದ್ದು, ಸೌದಿ ಅರೇಬಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ಅಪಾಯದ ಜಾಗೃತಿ ಎಚ್ಚರಿಕೆಯ (Alert) ಸೈರನ್ ಮೊಳಗಿಸಲಾಗಿದೆ. ಪವಿತ್ರ ನಗರದ ನಿರ್ಬಂಧಿತ ವಾಯುಪ್ರದೇಶಕ್ಕೆ ಪ್ರವೇಶಿಸುವ ಮುನ್ನವೇ ದಕ್ಷಿಣ ಮೆಕ್ಕಾ ಭಾಗದಲ್ಲಿ ಹೌತಿಗಳ ಸಶಸ್ತ್ರ ಡ್ರೋನ್ ಅನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಘಟನೆಯ ಬೆನ್ನಲ್ಲೇ ರಾಷ್ಟ್ರೀಯ ತುರ್ತು ಎಚ್ಚರಿಕೆ ವೇದಿಕೆಯ ಮೂಲಕ ಮೆಕ್ಕಾ, ಜೆಡ್ಡಾ ಮತ್ತು ತೈಫ್ ನಗರಗಳಲ್ಲಿ ವೈಮಾನಿಕ ದಾಳಿಯ ಭೀತಿಯ ಮುನ್ನೆಚ್ಚರಿಕೆ ನೀಡಲಾಗಿದ್ದು, ವಾಯುಪ್ರದೇಶ ಸುರಕ್ಷಿತವಾದ ನಂತರ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.

ಮೆಕ್ಕಾವನ್ನು ಗುರಿಯಾಗಿಸಿ ಹೌತಿಗಳು ನಡೆಸಲು ಯತ್ನಿಸಿದ ಈ ದಾಳಿ ಕೃತ್ಯವನ್ನು ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟ ಪಡೆ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಒಕ್ಕೂಟ ಪಡೆಯ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಾಲ್ಕಿ ಪ್ರತಿಕ್ರಿಯಿಸಿ, ಮೆಕ್ಕಾ ಮತ್ತು ಮದೀನಾ ಪವಿತ್ರ ಮಸೀದಿಗಳ ಹಾಗೂ ಕೋಟ್ಯಂತರ ಧಾರ್ಮಿಕ ಯಾತ್ರಿಕರ ಭದ್ರತೆಯು ತಮಗೆ “ರೆಡ್ ಲೈನ್” (ಅಂತಿಮ ಗೆರೆ) ಇದ್ದಂತೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಧಾರ್ಮಿಕ ಭಕ್ತಾದಿಗಳಲ್ಲಿ ಭೀತಿ ಸೃಷ್ಟಿಸಲು ಹಾಗೂ ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರಲು ಹೌತಿಗಳು ಕಣ್ಣಿಟ್ಟಿದ್ದು, ಇಂತಹ ಯಾವುದೇ ದುಷ್ಕೃತ್ಯಗಳನ್ನು ಹದ್ದುಬಸ್ತಿನಲ್ಲಿಡಲು ಸೌದಿ ಸೇನೆಯು ಕಠಿಣ ಪ್ರತ್ಯುತ್ತರ ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಸೌದಿ ಪಡೆಯ ಈ ಪ್ರತಿಪಾದನೆಗೆ ಸವಾಲೆಸೆದಿರುವ ಹೌತಿ ಪಡೆಗಳು, ಮೆಕ್ಕಾ ನಗರದ ವಿರುದ್ಧ ದಾಳಿ ನಡೆಸಿಲ್ಲ ಎಂದು ಹೇಳುತ್ತಲೇ ಮಿಲಿಟರಿ ಸಮರವನ್ನು ತೀವ್ರಗೊಳಿಸಿವೆ. ಯೆಮೆನ್‌ನ ಮಾರಿಬ್ ಪ್ರಾಂತ್ಯದ ವಾಯುಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದ ಸೌದಿ ಅರೇಬಿಯಾದ ಎಫ್-15 (F-15) ಯುದ್ಧ ವಿಮಾನವನ್ನು ತಮ್ಮ ದೇಶೀಯ ಕ್ಷಿಪಣಿ ಪಡೆ ಹೊಡೆದುರುಳಿಸಿದೆ ಎಂದು ಹೌತಿ ಸೇನಾ ವಕ್ತಾರ ಯಹ್ಯಾ ಸರೀ ಪ್ರತಿಪಾದಿಸಿದ್ದಾರೆ. ಹೌತಿಗಳ ರಾಜಕೀಯ ವಿಭಾಗದ ಪ್ರಮುಖರು ಮೆಕ್ಕಾವನ್ನು ಟಾರ್ಗೆಟ್ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದರೂ, ಸೌದಿಯ ಪ್ರಮುಖ ತೈಲ ಮೂಲಸೌಕರ್ಯಗಳು, ಸೇನಾ ನೆಲೆಗಳು ಹಾಗೂ ವಿಮಾನನಿಲ್ದಾಣಗಳನ್ನು ಗುರಿಯಾಗಿಸಿ ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸಿದ್ದಾರೆ. ಪವಿತ್ರ ಮೆಕ್ಕಾ ನಗರವೇ ಈಗ ವೈಮಾನಿಕ ದಾಳಿಯ ಭೀತಿಯ ವಲಯಕ್ಕೆ ಸಿಲುಕಿರುವುದು ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
 

 

Continue Reading
Click to comment

Leave a Reply

Your email address will not be published. Required fields are marked *

Advertisement