Published
3 hours agoon
By
Akkare News
‘ಗೃಹ ಲಕ್ಷ್ಮಿ’, ‘ಗೃಹ ಜ್ಯೋತಿ’ಯಿಂದ ಅನರ್ಹರ ಹೊರದಬ್ಬಲು ಕ್ರಮ * ₹ 100 ಕೋಟಿಗೂ ಹೆಚ್ಚು ಹಣ ಫಲಾನುಭವಿಗಳಲ್ಲದವರ ಪಾಲು– ಶಿವಕುಮಾರ್
ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳ ಪೈಕಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು ₹ 2,000 ನೀಡುವ ‘ಗೃಹ ಲಕ್ಷ್ಮಿ’ ಮತ್ತು 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯದ ‘ಗೃಹ ಜ್ಯೋತಿ’ಯ ಎಲ್ಲ ಫಲಾನುಭವಿಗಳಿಂದ ಹೊಸದಾಗಿ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪಬೇಕೆಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ, ಯೋಜನೆಯ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಕೂಡಾ ಉದ್ದೇಶಿಸಲಾಗಿದೆ. ಕೆಲವೇ ದಿನಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು’ ಎಂದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಕೆಲವರು ನಿಧನರಾಗಿದ್ದಾರೆ. ಆದರೆ, ಅವರ ಹೆಸರಿನಲ್ಲಿ ಬೇರೆಯವರು ಹಣ ಪಡೆಯುತ್ತಿದ್ದಾರೆ. ಹೀಗೆ ₹ 100 ಕೋಟಿಗೂ ಹೆಚ್ಚು ಹಣ ಫಲಾನುಭವಿಗಳಲ್ಲದವರ ಪಾಲಾಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದೆಯೇ ಇಲ್ಲವೇ ಎಂದು ಪರಿಶೀಲಿಸಿ, ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಬೇಕಾಗಿದೆ. ನಾವು ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಯಾರನ್ನೂ ತೆಗೆದುಹಾಕುವ ಉದ್ದೇಶವೂ ಸರ್ಕಾರಕ್ಕೆ ಇಲ್ಲ. ಆದರೆ, ಸರಿಯಾದ ಮಾಹಿತಿ ನೀಡುವ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಎಲ್ಲ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು’ ಎಂದು ಅವರು ವಿವರಿಸಿದರು.




