Connect with us

ಕ್ರೈಮ್ ನ್ಯೂಸ್

ಸರ್ಕಾರಿ ಕೆಲಸ, ಆಸ್ತಿ ಆಸೆಗೆ ಬಿದ್ದು ಹೆತ್ತಮ್ಮನನ್ನೇ ಕೊಂದಪಾಪಿ ಮಗಳು

Published

on

ಅಮ್ಮ, ಅಪ್ಪ ಎನ್ನುವ ಮಕ್ಕಳ ಪ್ರೀತಿ ಇತ್ತೀಚಿನ ದಿನಗಳಲ್ಲಿ ಕೇವಲ ಅಪ್ಪಂದಿರ ದಿನ ಅಥವಾ ಅಮ್ಮಂದಿರ ದಿನಕ್ಕೆ ಸ್ಟೇಟಸ್‌ ಹಾಕಿಕೊಳ್ಳಲು ಮಾತ್ರ ಸೀಮಿತವಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ತಮ್ಮ ಹೆತ್ತವರ ಮೇಲಿನ ಪ್ರೀತಿಗಿಂತ ಹಣದ ಮೇಲಿನ ವ್ಯಾಮೋಹ ಹೆಚ್ಚಾಗಿದೆ. ಹಣದ ಮೇಲಿನ ವ್ಯಾಮೋಹ ಮತ್ತು ಸ್ವಾರ್ಥ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ತಗೆದುಕೊಂಡು ಹೋಗಬಹುದು ಎಂಬುದಕ್ಕೆ ರಾಜಸ್ಥಾನದ ಜೈಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಹೆತ್ತ ತಾಯಿಗಿಂತ ಅವಳ ಬಳಿ ಇರುವ ಆಸ್ತಿ ಹಾಗೂ ಸರ್ಕಾರಿ ಉದ್ಯೋಗವೇ ದೊಡ್ಡದೆಂದು ಭಾವಿಸಿದ 23 ವರ್ಷದ ಯುವತಿಯೊಬ್ಬಳು, ತನ್ನನ್ನು ಹೆತ್ತು ಹೊತ್ತು ಬೆಳೆಸಿದ ಅಮ್ಮನನ್ನೇ ಕ್ರೂರವಾಗಿ ಕೊಲೆ ಮಾಡಿಸಿದ್ದಾಳೆ. ಇದು ಒಂದು ಅಪಘಾತ ಎಂದು ಮುಚ್ಚಿಹೋಗಬೇಕಿದ್ದ ಈ ಪ್ರಕರಣವನ್ನು ಪೊಲೀಸರು ಬೆನ್ನತ್ತಿದಾಗ, ಸ್ವತಃ ಮಗಳೇ ಹಣ ಕೊಟ್ಟು ಸುಪಾರಿ ಮಾಡಿಸಿರುವ ಸತ್ಯ ಬಯಲಾಗಿದೆ. ಸ್ಕಾರ್ಪಿಯೋ ಕಾರು ಹರಿಸಿ ಜೈಪುರದಲ್ಲಿ ತಾಯಿಯ ಹತ್ಯೆ ಜೈಪುರದ ಪ್ರತಾಪ್ ನಗರದಲ್ಲಿ ಜುಲೈ 3ರಂದು 45 ವರ್ಷದ ನೀರಜ್ ಶರ್ಮಾ ಎಂಬುವವರು ತಮ್ಮ ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ವೇಗದಲ್ಲಿ ಬಂದ ಸ್ಕಾರ್ಪಿಯೋ ಕಾರೊಂದು ಅವರ ಮೇಲೆ ಹರಿದಿದೆ. ಗುದ್ದಿದ ರಭಸಕ್ಕೆ ನೀರಜ್ ಅವರ ದೇಹದಲ್ಲಿ ಗಾಳಿಯಲ್ಲಿ ಸುಮಾರು ಅಡಿಗಳಷ್ಟು ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತವೆಸಗಿದ ಚಾಲಕ ತಕ್ಷಣ ಗಾಡಿಯೊಂದಿಗೆ ಪರಾರಿಯಾಗಿದ್ದಾನೆ. ಮೇಲ್ನೋಟಕ್ಕೆ ಇದೊಂದು ರಸ್ತೆ ಅಪಘಾತದಂತೆ ಕಂಡರೂ, ಪೊಲೀಸರ ತನಿಖೆಯಲ್ಲಿ ಇದೊಂದು ವ್ಯವಸ್ಥಿತ ಕೊಲೆ ಎಂಬುದು ದೃಢಪಟ್ಟಿದೆ.

ಸರ್ಕಾರಿ ಕೆಲಸಕ್ಕಾಗಿ ಕೊಲೆ

ಮೃತ ನೀರಜ್ ಶರ್ಮಾ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಪತಿಯ ನಿಧನದ ನಂತರ ನೀರಜ್ ಅವರಿಗೆ ನ್ಯಾಯಾಲಯದಲ್ಲಿ ಕೆಳ ಹಂತದ ಗುಮಾಸ್ತೆ ಹುದ್ದೆ ದೊರಕಿತ್ತು. ಆದರೆ, 23 ವರ್ಷದ ಮಗಳು ಆಯುಷಿ ಶರ್ಮಾಗೆ ತಂದೆಯ ಸಾವಿನ ನಂತರ ಆ ಸರ್ಕಾರಿ ಕೆಲಸ ತನಗೆ ಸಿಗಬೇಕು ಎಂಬ ಆಸೆ ಇತ್ತು.

ತಾಯಿ ಕೆಲಸಕ್ಕೆ ಸೇರಿಕೊಂಡದ್ದು ಆಕೆಗೆ ಇಷ್ಟವಾಗಲಿಲ್ಲ. ಇದಲ್ಲದೆ, ಕಳೆದ ಎರಡು ಮೂರು ವರ್ಷಗಳಿಂದ ತಾಯಿ ಮಗಳ ನಡುವೆ ಆಸ್ತಿ ವಿವಾದವೂ ಇತ್ತು. ಇವೆರಡೂ ಕಾರಣಗಳಿಂದ ಆಕೆ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಳು. ಈ ಕೃತ್ಯಕ್ಕೆ ಆಯುಷಿ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸೋದರ ಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಪ್ಲಾನ್‌ ಮಾಡಿದ್ದಾಳೆ. ಕೊನೆಗೆ ಹೆತ್ತ ತಾಯಿಯನ್ನಾ ಮುಗಿಸಲು ಭರತ್‌ಪುರ ನಿವಾಸಿ ಹೇಮಂತ್ ಶರ್ಮಾ ಎಂಬಾತನಿಗೆ ಬರೋಬ್ಬರಿ 7 ಲಕ್ಷ ರೂಪಾಯಿಗೆ ಸುಪಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲು ಕೂಡ ಬಾಡಿಗೆಯ ಥಾರ್ ವಾಹನದಲ್ಲಿ ನೀರಜ್ ಅವರ ಮೇಲೆ ಕಣ್ಗಾವಲು ಇರಿಸಿ ಕೊಲೆಗೆ ಯತ್ನಿಸಲಾಗಿತ್ತು. ಆದರೆ, ಆ ಪ್ರಯತ್ನ ವಿಫಲವಾಗಿತ್ತು. ನಂತರ ಸುಮಾರು ಒಂದು ತಿಂಗಳ ಕಾಲ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡಿ, ನಂತರ ಸ್ಕಾರ್ಪಿಯೋ ಕಾರು ಬಳಸಿ ಕೃತ್ಯವೆಸಗಲಾಗಿದೆ.

ಸಿಸಿಟಿವಿ ಕ್ಯಾಮೆರಾದಿಂದ ಬಯಲಾಯ್ತು ಸತ್ಯ

ಪೋಲಿಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇದು ಕೇವಲ ಅಪಘಾತವಲ್ಲ, ಬದಲಿಗೆ ಅತಿ ವೇಗವಾಗಿ ಬಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಕೊಲೆಯ ದಿನ ಮೋಹಿತ್ ಶರ್ಮಾ ಎಂಬಾತ ನೀರಜ್ ಅವರ ಲೊಕೇಶನ್ ಮಾಹಿತಿ ನೀಡುತ್ತಿದ್ದರೆ, ರೋಹಿತ್ ಜಾತವ್ ಬೈಕ್‌ನಲ್ಲಿ ನಿಂತು ಕಣ್ಗಾವಲು ಇರಿಸಿದ್ದ. ಆಕಾಶ್ ಶರ್ಮಾ ಎಂಬಾತ ಸ್ಕಾರ್ಪಿಯೋ ಚಲಾಯಿಸುತ್ತಿದ್ದನು. ನೀರಜ್ ಅವರ ಸಹೋದರ ರಾಕೇಶ್ ಕುಮಾರ್ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆಸ್ತಿ ವಿಚಾರದಲ್ಲಿ ಮಗಳು ಮತ್ತು ಅತ್ತೆಯ ಕಡೆಯವರು ನೀರಜ್‌ಗೆ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕಿದ್ದ ವಿಚಾರ ದೂರಿನಲ್ಲಿ ಉಲ್ಲೇಖವಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಆಯುಷಿ ಶರ್ಮಾ, ಚಿಕ್ಕಪ್ಪ ಮೋಹನ್ ಸ್ವರೂಪ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಬಲರಾಮ್‌ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ತನಿಖೆ ವೇಳೆ ಆಯುಷಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆಸ್ತಿ ಮತ್ತು ಉದ್ಯೋಗದಾಸೆಗೆ ತಾಯಿಯನ್ನೇ ಕೊಂದೆ ಎಂದು ಬಾಯ್ಬಿಟ್ಟಿದ್ದಾಳೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement