Published
14 hours agoon
By
Akkare News
ಸರ್ಕಾರಿ ಕೆಲಸಕ್ಕಾಗಿ ಕೊಲೆ
ಮೃತ ನೀರಜ್ ಶರ್ಮಾ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಪತಿಯ ನಿಧನದ ನಂತರ ನೀರಜ್ ಅವರಿಗೆ ನ್ಯಾಯಾಲಯದಲ್ಲಿ ಕೆಳ ಹಂತದ ಗುಮಾಸ್ತೆ ಹುದ್ದೆ ದೊರಕಿತ್ತು. ಆದರೆ, 23 ವರ್ಷದ ಮಗಳು ಆಯುಷಿ ಶರ್ಮಾಗೆ ತಂದೆಯ ಸಾವಿನ ನಂತರ ಆ ಸರ್ಕಾರಿ ಕೆಲಸ ತನಗೆ ಸಿಗಬೇಕು ಎಂಬ ಆಸೆ ಇತ್ತು.
ತಾಯಿ ಕೆಲಸಕ್ಕೆ ಸೇರಿಕೊಂಡದ್ದು ಆಕೆಗೆ ಇಷ್ಟವಾಗಲಿಲ್ಲ. ಇದಲ್ಲದೆ, ಕಳೆದ ಎರಡು ಮೂರು ವರ್ಷಗಳಿಂದ ತಾಯಿ ಮಗಳ ನಡುವೆ ಆಸ್ತಿ ವಿವಾದವೂ ಇತ್ತು. ಇವೆರಡೂ ಕಾರಣಗಳಿಂದ ಆಕೆ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಳು. ಈ ಕೃತ್ಯಕ್ಕೆ ಆಯುಷಿ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸೋದರ ಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಪ್ಲಾನ್ ಮಾಡಿದ್ದಾಳೆ. ಕೊನೆಗೆ ಹೆತ್ತ ತಾಯಿಯನ್ನಾ ಮುಗಿಸಲು ಭರತ್‌ಪುರ ನಿವಾಸಿ ಹೇಮಂತ್ ಶರ್ಮಾ ಎಂಬಾತನಿಗೆ ಬರೋಬ್ಬರಿ 7 ಲಕ್ಷ ರೂಪಾಯಿಗೆ ಸುಪಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲು ಕೂಡ ಬಾಡಿಗೆಯ ಥಾರ್ ವಾಹನದಲ್ಲಿ ನೀರಜ್ ಅವರ ಮೇಲೆ ಕಣ್ಗಾವಲು ಇರಿಸಿ ಕೊಲೆಗೆ ಯತ್ನಿಸಲಾಗಿತ್ತು. ಆದರೆ, ಆ ಪ್ರಯತ್ನ ವಿಫಲವಾಗಿತ್ತು. ನಂತರ ಸುಮಾರು ಒಂದು ತಿಂಗಳ ಕಾಲ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡಿ, ನಂತರ ಸ್ಕಾರ್ಪಿಯೋ ಕಾರು ಬಳಸಿ ಕೃತ್ಯವೆಸಗಲಾಗಿದೆ.
ಸಿಸಿಟಿವಿ ಕ್ಯಾಮೆರಾದಿಂದ ಬಯಲಾಯ್ತು ಸತ್ಯ
ಪೋಲಿಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇದು ಕೇವಲ ಅಪಘಾತವಲ್ಲ, ಬದಲಿಗೆ ಅತಿ ವೇಗವಾಗಿ ಬಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಕೊಲೆಯ ದಿನ ಮೋಹಿತ್ ಶರ್ಮಾ ಎಂಬಾತ ನೀರಜ್ ಅವರ ಲೊಕೇಶನ್ ಮಾಹಿತಿ ನೀಡುತ್ತಿದ್ದರೆ, ರೋಹಿತ್ ಜಾತವ್ ಬೈಕ್‌ನಲ್ಲಿ ನಿಂತು ಕಣ್ಗಾವಲು ಇರಿಸಿದ್ದ. ಆಕಾಶ್ ಶರ್ಮಾ ಎಂಬಾತ ಸ್ಕಾರ್ಪಿಯೋ ಚಲಾಯಿಸುತ್ತಿದ್ದನು. ನೀರಜ್ ಅವರ ಸಹೋದರ ರಾಕೇಶ್ ಕುಮಾರ್ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆಸ್ತಿ ವಿಚಾರದಲ್ಲಿ ಮಗಳು ಮತ್ತು ಅತ್ತೆಯ ಕಡೆಯವರು ನೀರಜ್‌ಗೆ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕಿದ್ದ ವಿಚಾರ ದೂರಿನಲ್ಲಿ ಉಲ್ಲೇಖವಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಆಯುಷಿ ಶರ್ಮಾ, ಚಿಕ್ಕಪ್ಪ ಮೋಹನ್ ಸ್ವರೂಪ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಬಲರಾಮ್‌ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ತನಿಖೆ ವೇಳೆ ಆಯುಷಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆಸ್ತಿ ಮತ್ತು ಉದ್ಯೋಗದಾಸೆಗೆ ತಾಯಿಯನ್ನೇ ಕೊಂದೆ ಎಂದು ಬಾಯ್ಬಿಟ್ಟಿದ್ದಾಳೆ.