Published
4 months agoon
By
Akkare News
ಬೆಂಗಳೂರು: ಪದೇಪದೇ ಮನೆಗೆ ಬರುತ್ತಿದ್ದ ಪ್ರಿಯಕರ ಮತ್ತು ಇತರ ಸ್ನೇಹಿತರ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ 17 ವರ್ಷದ ಪುತ್ರಿ ಪ್ರಿಯಕರ ಹಾಗೂ ಸ್ನೇಹಿತರ ಜೊತೆಗೂಡಿ ತನ್ನ ತಾಯಿಯನ್ನು ಕೊಲೆಗೈದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸುಬ್ರಮಣ್ಯಪುರ ಬಳಿಯ ಉತ್ತರಹಳ್ಳಿ ನಿವಾಸಿ ನೇತ್ರಾವತಿ (34) ಮೃತ ಮಹಿಳೆ.
ಉತ್ತರಹಳ್ಳಿ ನಿವಾಸಿ ಮೃತ ನೇತ್ರಾವತಿ ‘ವಿ ನೆಸ್ಟ್’ ಎಂಬ ಸಾಲ ವಸೂಲಾತಿ ಕಂಪೆನಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಪತಿಯಿಲ್ಲ. ಇವರ 17ರ ಪುತ್ರಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನು ಆಗಾಗ ಮನೆಗೆ ಕರೆತರುತ್ತಿದ್ದಳು. ಇದಕ್ಕೆ ನೇತ್ರಾವತಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ಅಕ್ಟೋಬರ್ 25ರಂದು ರಾತ್ರಿ, ಪುತ್ರಿ ತನ್ನ ಪ್ರಿಯಕರ ಸೇರಿ ಆತನ ಮೂವರು ಸ್ನೇಹಿತರನ್ನೂ ಮನೆಗೆ ಕರೆತಂದಿದ್ದಳು. ರಾತ್ರಿ 11 ಗಂಟೆಗೆ ಎಚ್ಚರಗೊಂಡ ತಾಯಿ ನೇತ್ರಾವತಿ, ಪುತ್ರಿಯ ಕೋಣೆಯಲ್ಲಿ ನಾಲ್ವರು ಯುವಕರು ಇದ್ದು, ನಗುತ್ತಿರುವುದು, ಮಾತಾಡುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ತಕ್ಷಣವೇ ಮಗಳನ್ನು ತರಾಟೆಗೆ ತೆಗೆದುಕೊಂಡು, ಯುವಕರನ್ನು ಮನೆಯಿಂದ ಹೊರಗೆ ಹೋಗುವಂತೆ ಎಚ್ಚರಿಸಿದ್ದಾರೆ. ಅವರು ಹೋಗಲು ನಿರಾಕರಿಸಿದ್ದಾರೆ. ಈ ವೇಳೆ ಆಕೆ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ತಾಯಿಯ ಎಚ್ಚರಿಕೆಯಿಂದ ಕೋಪಗೊಂಡ ಪುತ್ರಿ, ಪ್ರಿಯಕರ ಮತ್ತು ಸ್ನೇಹಿತರೊಂದಿಗೆ ಸೇರಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ನೇತ್ರಾವತಿಯ ಬಾಯಿಯನ್ನು ಬಲವಂತವಾಗಿ ಮುಚ್ಚಿ, ಟವೆಲ್‌ನಿಂದ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ, ಆತ್ಮಹತ್ಯೆ ಎಂದು ಬಿಂಬಿಸಲು, ನೇತ್ರಾವತಿಯ ಕುತ್ತಿಗೆಗೆ ಸೀರೆಯನ್ನು ಬಿಗಿದು ಫ್ಯಾನ್‌ಗೆ ನೇಣು ಹಾಕಿ, ಪುತ್ರಿ ಸೇರಿದಂತೆ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.