Published
5 months agoon
By
Akkare News
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ಸಿಬಿ ಅಧಿಕಾರಿಗಳು ಬರೋಬ್ಬರಿ 50 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವರ್ಷ ಎನ್‌ಸಿಬಿಯಿಂದ 18 ಪ್ರಕರಣಗಳಲ್ಲಿ 45 ಆರೋಪಿಗಳನ್ನ ಬಂಧಿಸುವ ಮೂಲಕ 100 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಬಂಧಿತರಿಂದ ಒಟ್ಟು 45 ಕೆಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆ ಸೀಜ್ ಮಾಡಲಾಗಿದೆ. ಥೈಲ್ಯಾಂಡ್‌ನಿಂದ ಡ್ರಗ್ಸ್ ಸಾಗಾಟ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಮಾಹಿತಿಯಂತೆ ಅ.9ರಂದು ಕೊಲಂಬೋದಿಂದ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಈ ಇಬ್ಬರಿಂದ 31 ಕೆಜಿ ಹೈಡ್ರೋಗಾಂಜಾ, 4 ಕೆಜಿ ಸೈಲೋಸಿಬಿನ್ ಅಣಬೆ ಜಪ್ತಿ ಮಾಡಲಾಗಿದ್ದು, ಇಬ್ಬರ ವಿಚಾರಣೆ ವೇಳೆ ಮುಂದಿನ ವಿಮಾನದಲ್ಲಿ ಹ್ಯಾಂಡ್ಲರ್ ಶ್ರೀಲಂಕಾದಿಂದ ಬರುವ ಮಾಹಿತಿ ಸಿಕ್ಕಿತ್ತು. ಅದರಂತೆ ಕಾದು ಇನ್ನೋರ್ವ ಶ್ರೀಲಂಕಾ ಪ್ರಜೆಯನ್ನು ಕೂಡ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಲಂಕಾದ ಹ್ಯಾಂಡ್ಲರ್ನಿಂದ ತಂದಿದ್ದ 14 ಕೆ.ಜಿ ಹೈಡ್ರೋಗಾಂಜಾ, 2 ಕೆಜಿ ಅಣಬೆ, 250 ಫುಡ್ ಟಿನ್ಗಳಲ್ಲಿ ತಂದಿದ್ದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಎನ್‌ಸಿಬಿ ಘಟಕವು ಈ ವರ್ಷದಲ್ಲಿ ಇದುವರೆಗೆ ಒಟ್ಟು 18 ಪ್ರಕರಣಗಳಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. 18 ಪ್ರಕರಣಗಳಲ್ಲಿ 45 ಆರೋಪಿಗಳನ್ನ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕೇರಳ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಇತ್ತೀಚೆಗೆ ಸಿಸಿಬಿ ಹಾಗೂ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ 6 ಜನರನ್ನು ಬಂಧಿಸಿದ್ದರು. ಕೆಜಿ ನಗರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿ ಹೆಚ್ಚಿನ ಹಣ ಗಳಿಸುತ್ತಿದ್ದ ರಶೀದ್ ಎಂಬಾತನನ್ನು ಬಂಧಿಸಿ ಏಳು ಕೆಜಿ ಹೈಡ್ರೋ ಗಾಂಜಾ ಸೀಜ್ ಮಾಡಿದ್ದರು.