Published
2 hours agoon
By
Akkare News
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವದ ಗುರುತು ಪತ್ತೆಯಾಗಿದ್ದು, ಮೃತ ವ್ಯಕ್ತಿ ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ ವಿಜಯ್ ಕುಮಾರ್ (32) ಎಂದು ತಿಳಿದುಬಂದಿದೆ.
ಹಲವು ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ವಿಜಯ್ ಕುಮಾರ್, ಕೆಆರ್ ಪುರಂ ಪ್ರದೇಶದಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಯುವತಿಯೊಬ್ಬಳನ್ನು ಪ್ರೀತಿಸಿ ಸುಮಾರು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಮದುವೆಯಾದ ದಿನದಿಂದಲೇ ಪತಿ-ಪತ್ನಿ ನಡುವೆ ವೈಮನಸ್ಸು ಆರಂಭವಾಗಿದ್ದು, ಪತ್ನಿ ಪದೇಪದೇ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾರಣ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ವಿಜಯ್ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ಬಂಧನದ ಬಳಿಕವೇ ಕೊಲೆ ಹಿಂದಿನ ನಿಖರ ಕಾರಣ ಹಾಗೂ ರಹಸ್ಯ ಬಹಿರಂಗವಾಗುವ ಸಾಧ್ಯತೆ ಇದೆ.