ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಫೆ.17- 24: ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ

Published

on

ಪುತ್ತೂರು: ಹುತ್ತಕ್ಕೆ ಪೂಜೆ ಸಲ್ಲಿಸುವ ಕ್ಷೇತ್ರ ಎಂದೇ ಪ್ರಸಿದ್ಧಿಯಾದ ಕೊಳ್ತಿಗೆ ಗ್ರಾಮದ ಪಾಲ್ತಾಡು ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಫೆ.17 ರಿಂದ ಫೆ.24 ರ ತನಕ ವಿವಿಧ ವೈದಿಕ, ಧಾರ್ಮಿಕ, ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತಸರ ಸಂತೋಷ್ ಕುಮಾರ್ ರೈ ನಳಿಲು ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಇರುವ ದೇವಸ್ಥಾನದ ಆರಂಭದಲ್ಲಿ ಮುಳಿಹುಲ್ಲಿನಿಂದ ನಿರ್ಮಿತವಾಗಿತ್ತು. ಬಳಿಕ 1956 ರಲ್ಲಿ ಮುಳಿ ಮಾಡು ತೆಗೆದು ಹಂಚಿನ ಮಾಡು ನಿರ್ಮಿಸಲಾಯಿತು. ಬಳಿಕ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳು ಶ್ರೀದೇವರ ಪ್ರತಿಷ್ಠಾಪನೆ ಮಾಡಿದ್ದರು. ಬಳಿಕ 2004 ರಲ್ಲಿ ಜೀರ್ಣೋದ್ಧಾರಗೊಂಡು, ಬ್ರಹ್ಮಕಲಶೋತ್ಸವ ನಡೆದಿತ್ತು. ಬಳಿಕ ದಿನಗಳಲ್ಲಿ ಅರ್ಚಕರ ಮನೆ, ಅತಿಥಿಗೃಹ, ಪಾಕಶಾಲೆ, ಅನ್ನಛತ್ರ ಹೀಗೆ ಇಂದಿನ ತನಕ ಸುಮಾರು ನಾಲ್ಕು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯ ನಡೆದಿದೆ ಎಂದು ತಿಳಿಸಿದ ಅವರು, ಸಂತಾನ ಭಾಗ್ಯ, ಕಂಕಣ ಭಾಗ್ಯ, ಸರ್ಪದೋಷ ನಿವಾರಣೆ ಮುಂತಾದವುಗಳ ಕುರಿತು ಪ್ರಾರ್ಥಿಸಿದಲ್ಲಿ ದೇವರ ಅನುಗ್ರಹ ದೊರೆತಿದೆ ಎಂದು ತಿಳಿಸಿದರು.

ಫೆ.16 ರಂದು ಬೆಳಿಗ್ಗೆ 11.30 ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದ್ದು, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಅರ್ಚಕ ಶ್ರೀನಿವಾಸ ಹೆಬ್ಬಾರ್ ದೀಪ ಪ್ರಜ್ವಲನೆ ಮಾಡುವರು. ಪಾಲ್ತಾಡು ಕುಟುಂಬದ ಯಜಮಾನ ಮಾಜಿ ಪಟೇಲ ನಾರಾಯಣ ರೈ ಉದ್ಘಾಟಿಸುವರು. ಫೆ.17 ಶನಿವಾರ ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3 ಗಂಟೆಗೆ ಹಸಿರು ಹೊರಕಾಣಿಕೆ ಮೆರವಣಿಗೆಗೆ ಪಾಲ್ತಾಡಿ ಚಾಕೋಟಿತ್ತಡಿ ಮಾಡ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ದೈವಸ್ಥಾನದ ಅಧ್ಯಕ್ಷ ಸಂಜೀವ ಗೌಡ ಚಾಲನೆ ನೀಡುವರು. ಸಂಜೆ 6 ಗಂಟೆಗೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ ನಡೆದು ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾಗೇಶ ತಂತ್ರಿಗಳು ದೀಪ ಪ್ರಜ್ವಲನೆ ಮಾಡಲಿದ್ದು, ಬ್ರಹ್ಮಶ್ರೀ ಕಾರ್ತಿಕ್ ತಂತ್ರಿ ಕೆಮ್ಮಿಂಜೆ ಧಾರ್ಮಿಕ ಉಪನ್ಯಾಸ ನೀಡುವರು. ರಾತ್ರಿ 7.30 ರಿಂದ ಪುತ್ತೂರು ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ವತಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.

ಫೆ.18 ರಂದು ಮುಂಜಾನೆ 5 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, 9 ಗಂಟೆಗೆ ಭಜನೆ, 10 ರಿಂದ ಗಾಯನಗೋಷ್ಠಿ 1.30 ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 5 ರಿಂದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ. ರಾತ್ರಿ 7 ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 9 ರಿಂದ ದೇವದಾಸ್ ಕಾಪಿಕಾಡ್ ರಚಿಸಿದ ಪುದರ್ ದೀದಾಂಡ್ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.19 ಸೋಮವಾರ ಮುಂಜಾನೆ 5 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30 ಕ್ಕೆ ಯಕ್ಷಗಾನ ತಾಳಮದ್ದಳೆ, 4 ರಿಂದ ಮಣಿಕ್ಕರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಉಪ್ಪಿನಂಗಡಿ ಸುಸ್ವರ ಮೆಲೋಡೀಸ್ ವತಿಯಿಂದ ಭಕ್ತ-ಭಾವ-ಸಂಗಮ ನಡೆಯಲಿದೆ. ರಾತ್ರಿ 7 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 9 ರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ.





ಫೆ.20 ಮಂಗಳವಾರ ಬೆಳಿಗ್ಗೆ 5 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಮಧ್ಯಾಹ್ನ 1.30 ರಿಂದ ಯಕ್ಷಗಾನ ತಾಳಮದ್ದಳೆ, 4 ರಿಂದ ಮಣಿಕ್ಕಳ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 5 ರಿಂದ ಸಂಗೀತ ಭಕ್ತಿ ರಸಮಂಜರಿ ಜರಗಲಿದೆ. 7 ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಉದ್ಯಮಿ ಗಿರಿಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 9 ರಿಂದ ಯಕ್ಷಗಾನ ಬಯಲಾಟ ‘ಶರಣ ಸೇವಾ ರತ್ನ ಶ್ರೀನಿವಾಸ ಕಲ್ಯಾಣ’ ಪ್ರದರ್ಶನಗೊಳ್ಳಲಿದೆ.

ಫೆ.21 ಬುಧವಾರ ದಂದು ಮುಂಜಾನೆ 5 ರಿಂದ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ 3 ರಿಂದ ಯಕ್ಷಗಾನ ತಾಳಮದ್ದಳೆ, ಪಾಲ್ತಾಡು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 5 ರಿಂದ ನೃತ್ಯ ಸಂಭ್ರಮ ಪ್ರದರ್ಶನಗೊಳ್ಳಲಿದೆ. 7 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬಳಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ರಿಂದ ಅಮ್ಮ ಕಲಾವಿದೆ‌ರ್ ವತಿಯಿಂದ ಅಲೇ ಬುಡಿಯೆರ್ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.22 ಗುರುವಾರ ಬೆಳಿಗ್ಗೆ ಮಹಾಗಣಪತಿ ಹೋಮ, 7.48 ರಿಂದ 8.32 ರ ವರೆಗೆ ನಡೆಯುವ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ’ ಜರಗಿ ಮಧ್ಯಾಹ್ನ ಮಹಾಪೂಜೆ, ಶ್ರೀ ಭೂತಬಲಿ ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ರಿಂದ ನೃತ್ಯ-ಗಾನ-ಸಂಭ್ರಮ ನಡೆಯಲಿದೆ. 5.30 ರಿಂದ ಹಳೆಯಂಗಡಿ ಪಾವಂಜೆ ನಾಗವ್ವಜ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಯಕ್ಷಗಾನ ಬಯಲಾಟ ‘ಕಲ್ಯಾಣತ್ರಯ’ ಪ್ರದರ್ಶನಗೊಳ್ಳಲಿದೆ.

ಫೆ.23 ಶುಕ್ರವಾರ ವರ್ಷಾವಧಿ ಮಹೋತ್ಸವ, 33ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 5ಕ್ಕೆ ಕುಣಿತ ಭಜನೆ, 7 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, 7.30 ರಿಂದ ಶ್ರೀ ದೇವರಿಗೆ ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಬಳಿಕ ಅನ್ನಸಂತರ್ಪನೆ ಜರಗಲಿದೆ.

ಫೆ.24 ಶನಿವಾರ ಬೆಳಿಗ್ಗೆ 6 ಕ್ಕೆ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ, 10.30 ಕ್ಕೆ ರುದ್ರಚಾಮುಂಡಿ ದೈವದ ನೇಮೋತ್ಸವ, ಸಂಜೆ 4 ಕ್ಕೆ ಗುಳಿಗ ದೈವದ ತಂಬಿಲ ನಡೆಯಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಲಯ ಸಂಚಾಲಕ ಸುರೇಶ್ ರೈ ವಿಟ್ಲ ಕೊಲ್ಯ, ಪ್ರಚಾರ ಸಮಿತಿ ಸಹಸಂಚಾಲಕ ಪ್ರವೀಣ್ಚೆನ್ನಾವರ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version