Published
6 months agoon
By
Akkare Newsಮಂಗಳೂರು ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಇಂದು (ಜು.8) ರಜೆ ಘೋಷಿಸಲಾಗಿದೆ.
ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮಂಗಳೂರು ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಂಗಳೂರು ತಹಶೀಲ್ದಾರ್ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ ಕೂಡ ಸಾಧಾರಣ ಮಳೆ ಮುಂದುವರಿದಿದೆ. ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿಉತ್ತಮ ಮಳೆಯಾದರೆ ನಗರ ಭಾಗದಲ್ಲಿ ರಭಸದ ಗಾಳಿಯ ಜತೆಗೆ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ 40.4 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಂಗಳೂರಿನಲ್ಲಿ ಬೆಳಗ್ಗೆ ಗಾಳಿಯ ಜತೆಗೆ ಶುರುವಾದ ಮಳೆ ಕೆಲವು ಕಡೆಯಲ್ಲಿ ಉತ್ತಮವಾಗಿ ಸುರಿದರೆ ಮತ್ತೆ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಗ್ರಾಮಾಂತರ ಭಾಗವಾದ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳದಲ್ಲಿಉತ್ತಮ ಮಳೆ ಭಾನುವಾರವೂ ಮುಂದುವರಿದಿದೆ. ಜಿಲ್ಲೆಯಲ್ಲಿ ಕಡಬ ಹಾಗೂ ಮಂಗಳೂರಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಮೂಲ್ಕಿಯಲ್ಲಿ29.6 ಮಿ.ಮೀ, ಉಳ್ಳಾಲದಲ್ಲಿ42.7 ಮಿ.ಮೀ, ಕಡಬದಲ್ಲಿ27.6 ಮಿ.ಮೀ, ಮೂಡುಬಿದಿರೆಯಲ್ಲಿ 37.2 ಮಿ.ಮೀ, ಸುಳ್ಯದಲ್ಲಿ41.5 ಮಿ.ಮೀ, ಪುತ್ತೂರಿನಲ್ಲಿ38 ಮಿ.ಮೀ, ಮಂಗಳೂರು 27.2ಮಿ.ಮೀ, ಬಂಟ್ವಾಳದಲ್ಲಿ45.3 ಮಿ.ಮೀ, ಬೆಳ್ತಂಗಡಿಯಲ್ಲಿ49.8 ಮಿ.ಮೀ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ಮಂಗಳೂರು ಮತ್ತು ಉಳ್ಳಾಲದಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ. ತುಂಬೆಯಲ್ಲಿ ನೇತ್ರಾವತಿ ನದಿಯ ಮಟ್ಟ 3.70 ಮಿ ಇತ್ತು.
ಚಾರಣ ಸಂಪೂರ್ಣ ನಿರ್ಬಂಧ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿತ, ಮರ ಬೀಳುವುದು, ಸಿಡಿಲು ಮುಂತಾದ ಅವಘಢಗಳ ಸಾಧ್ಯತೆ ಹಿನ್ನೆಲೆಯಲ್ಲಿ ಚಾರಣವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದ ಘಟನೆಗಳು ಸಂಭವಿಸುತ್ತಿವೆ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆಗಾಲ ಮುಗಿಯುವವರೆಗೆ ಹೋಮ್ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರೆಕ್ಕಿಂಗ್ ಸಾಹಸ ಚಟುವಟಿಕೆ ಇತ್ಯಾದಿ ನಿಷೇಧಿಸಲಾಗಿದೆ. ಈ ಆದೇಶದ ಉಲ್ಲಂಘನೆಯು ಪ್ರಕೃತಿ ವಿಕೋಪ ನಿರ್ವಹಣೆ ಕಾಯಿದೆ- 2005ರ ಸೆಕ್ಷನ್ 51ಬಿ ಅಡಿ ದಂಡ ವಿಧಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.