Published
2 months agoon
By
Akkare Newsಸುಪ್ರೀಂಕೋರ್ಟ್‌ನ ವರದಿಗಾರಿಕೆ ಮಾಡುವ ಪತ್ರಕರ್ತರಿಗೆ ಕಾನೂನು ಪದವಿ ಅಗತ್ಯವಿಲ್ಲ ಎಂದು ಸುಪ್ರೀಂ ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಗುರುವಾರ ಹೇಳಿದ್ದಾರೆ. ಈ ಬಗ್ಗೆ ಕಾನೂನು ಸುದ್ದಿ ವೆಬ್‌ಸೈಟ್ ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಡಿ.ವೈ. ಚಂದ್ರಚೂಡ್ ಅವರ ಉಸ್ತುವಾರಿಯಲ್ಲಿ ನ್ಯಾಯಾಲಯದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ನ ವರದಿಗಾರಿಕೆಗೆ ಕಾನೂನು ಪದವಿ ಅಗತ್ಯವಿಲ್ಲ ಎನ್ನುವ ನಿರ್ಣಯ ತೆಗೆದುಕೊಂಡಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಜೆಐ ಡಿ.ವೈ ಚಂದ್ರಚೂಡ್ ಅವರು ಮಾಹಿತಿ ನೀಡಿದ್ದಾರೆ.
“ನಿನ್ನೆಯಷ್ಟೇ, ನಾನು ಸುಪ್ರೀಂ ಕೋರ್ಟ್‌ಗೆ ಮಾನ್ಯತೆ ಪಡೆದ ಪತ್ರವ್ಯವಹಾರದ ಹೆಜ್ಜೆಗುರುತನ್ನು ವಿಸ್ತರಿಸುವ ಫೈಲ್‌ಗೆ ಸಹಿ ಹಾಕಿದ್ದೇನೆ. ಯಾವ ಕಾರಣಕ್ಕಾಗಿ ನೀವು ಕಾನೂನು ಎಲ್‌ಎಲ್‌ಬಿ ಪಾಸಾಗಿರಬೇಕು ಎಂಬ ಷರತ್ತು ಇತ್ತು ಎಂದು ನನಗೆ ತಿಳಿದಿಲ್ಲ. ನಾವು ಅದನ್ನು ಸಡಿಲಗೊಳಿಸಿದ್ದೇವೆ” ಎಂದು ಸಿಜೆಐ ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಮಾನ್ಯತೆ ಪಡೆದ ಪತ್ರಕರ್ತರು ಕೂಡ ಸುಪ್ರೀಂ ಕೋರ್ಟ್ ಪಾರ್ಕಿಂಗ್‌ಗೆ ಇಲ್ಲಿ ಪ್ರವೇಶವನ್ನು ಹೊಂದಿರುತ್ತಾರೆ ಎಂದು ಚಂದ್ರಚೂಡ್ ಮಾತನಾಡುತ್ತಾ ಹೇಳಿದ್ದಾರೆ. ಸುಪ್ರಿಂ ಕೋರ್ಟ್ ಆವರಣದಲ್ಲಿ ನಡೆದ ದೀಪಾವಳಿ ಪೂರ್ವ ಕೂಟದಲ್ಲಿ ಸಿಜೆಐ ಚಂದ್ರಚೂಡ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಈ ಹಿಂದೆ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಅಗತ್ಯವಿರುವ ಮಾನ್ಯತಾ ಪತ್ರ ಪಡೆಯಲು ಮೊದಲು ಕಾನೂನು ಪದವಿ ಅಗತ್ಯವಾಗಿತ್ತು ಎಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ. 2018 ರಲ್ಲಿ, ಸುಪ್ರೀಂ ಕೋರ್ಟ್ ಕಾನೂನು ವರದಿಗಾರರ ಮಾನ್ಯತೆಗಾಗಿ ತನ್ನ ನಿಯಮಗಳಿಗೆ ತಿದ್ದುಪಡಿ ಮಾಡಿತ್ತು ಎಂದು ಅದು ಹೇಳಿದೆ.
ಸುಪ್ರಿಂ ಕೋರ್ಟ್‌ನಲ್ಲಿ ವರದಿಗಾರರಾಗಿ ಮಾನ್ಯತೆ ಪಡೆಯಲು ಕಾನೂನು ಪದವಿಯನ್ನು ಹೊಂದುವ ಷರತ್ತನ್ನು ಬಿಟ್ಟುಬಿಡಲು, ಸೂಕ್ತ ಸಂದರ್ಭಗಳಲ್ಲಿ ವಿವೇಚನೆಯನ್ನು ಚಲಾಯಿಸಲು ತಿದ್ದುಪಡಿ ಮಾಡಲಾದ ನಿಯಮಗಳು ಭಾರತದ ಮುಖ್ಯ ನ್ಯಾಯಾಧೀಶರಿಗೆ ಅನುವು ಮಾಡಿತ್ತು. ಈಗ ಅದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.