Published
2 months agoon
By
Akkare Newsಮಡಿಕೇರಿ : ಅಕಾಲಿಕ ಮಳೆಯಿಂದ ಕಾಫಿ ಬೆಳೆ ನೆಲಕಚ್ಚಿದ್ದು ಕಾಫಿ ಬೆಳೆಗಾರ ಕಂಗಾಲ್ ಆಗಿ ಸಂಕಷ್ಟದಲ್ಲಿದ್ದಾನೆ. ಅಕ್ಟೋಬರ್ ತಿಂಗಳಲ್ಲಿ ನರಂತರವಾಗಿ ಅಕಾಲಿಕ ಮಳೆ ಸುರಿ ಪರಿಣಾಮ ಕಾಫಿ ಫಸಲಿಗೆ ಭಾರಿ ಹಾನಿಯಾಗಿದೆ.
ಕೊಡಗಿನಲ್ಲಿ ಸ್ಥಳೀಯ ಕೃಷಿಕರೇ ಕಾಫಿಯನ್ನು ಬೆಳೆಯುತ್ತಿದ್ದು, ಅತಿ ಹೆಚ್ಚು ಅರೇಬಿಕಾ ಕಾಫಿ ಉತ್ಪಾದನೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ, 1,06,921 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತದೆ, ಇದು ಕರ್ನಾಟಕ ರಾಜ್ಯದ ಒಟ್ಟು ಕಾಫಿ ಪ್ರದೇಶದ 44% ರಷ್ಟಿದೆ. ಜಿಲ್ಲೆಯ ಬಹುತೇಕ ಕಾಫಿ ಪ್ರದೇಶವು ಸಣ್ಣ ಬೆಳೆಗಾರರ ಒಡೆತನದಲ್ಲಿದೆ, ಅಂದರೆ 10 ಹೆಕ್ಟೇರ್‌ಗಿಂತ ಕಡಿಮೆ. ಕೊಡಗು ವರ್ಷಕ್ಕೆ ಸುಮಾರು 1,10,730 ಮೆಟ್ರಿಕ್ ಟನ್ ಕಾಫಿ ಬೆಳೆಯನ್ನು ಉತ್ಪಾದಿಸುತ್ತದೆ, ಇದು ರಾಜ್ಯದ 50% ಮತ್ತು ದೇಶದ ಉತ್ಪಾದನೆಯ 35% ರಷ್ಟಿದೆ. ಆದರೆ ಕಳೆದ ಒಂದು ದಶಕದಿಂದ ಪ್ರತಿವರ್ಷ ಅಕಾಲಿಕ ಮಳೆಯಿಂದ ಕಾಫಿ ಫಸಲಿಗೆ ಭಾರಿ ಹೊಡೆತ ಬಿದ್ದಿದೆ. ಈ ಬಾರಿ ಕೂಡ ಬೆಳೆಗಾರ ಉತ್ತಮ ನಿರೀಕ್ಷೆಯಲ್ಲಿದ್ದ ಆದ್ರೆ ಮುಂಗಾರು ಧಾರಾಕಾರ ಸುರಿದ ಪರಿಣಾಮ ಶೇ.60ರಷ್ಟು ಕಾಫಿ ಫಸಲಿಗೆ ಹಾನಿಯಾಗಿದೆ ಎನ್ನಲಾಗಿದೆ.
ಕೊಡಿನ ಸೋಮವಾರ ಪೇಟೆ ತಾಲೂಕು ಒಂದರಲ್ಲಿಯೇ 28,590 ಹೆಕ್ಟೇರ್‌ನಲ್ಲಿ ಕಾಫಿ ಉತ್ಪಾದನೆಯಾಗುತ್ತಿದ್ದು, 22,900 ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ 5,690 ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಉತ್ತಮ ಹವಾಮಾನ, ನಿಗದಿತ ಸಮಯದಲ್ಲಿ ಮಳೆ ಬೀಳುವುದು, ಕಾಫಿ ಫಸಲಿನೊಂದಿಗೆ ಮತ್ತು ಉತ್ತಮ ಬೆಲೆ ಸಿಕ್ಕರೆ ಮಾತ್ರ ಬೆಳೆಗಾರ ಕಾಫಿ ತೋಟ ನಿರ್ವಹಣೆ ಮಾಡಬಹುದು. ಆದರೆ ಪ್ರಸಕ್ತ ವರ್ಷವೂ ಅಕಾಲಿಕ ಮಳೆ ಬೆಳೆಗಾರರ ನೆಮ್ಮದಿ ಕಸಿದುಕೊಂಡಿದೆ. ನವೆಂಬರ್ ಕೊನೆಯ ವಾರದಿಂದ ಕಾಫಿ ಬೆಳೆ ಕೊಯ್ಲಿಗೆ ಬರುವುದು ಸರ್ವೇ ಸಾಮಾನ್ಯ . ಆದರೆ ಈ ವರ್ಷ ಅಕ್ಟೋಬರ್ ಪ್ರಾರಂಭದಿಂದಲೇ ಅಕಾಲಿಕವಾಗಿ ಕಾಫಿ ಹಣ್ಣಾಗಿದೆ. ಕಳೆದ 20 ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಕಾಫಿ ಹಣ್ಣು ಗಿಡದಿಂದ ಉದುರಿ ಮಣ್ಣು ಸೇರಿದೆ.
ಜೊತೆಗೆ ಅಳಿದುಳಿದ ಕಾಫಿ ಕೊಯ್ಲು ಮಾಡಿದವರು ಕಾಫಿ ಒಣಗಿಸಲು ಸಮಸ್ಯೆಯಾಗಿ, ಕಾಫಿ ಗುಣಮಟ್ಟವನ್ನು ಕಳೆದು ಸೂಕ್ತ ಬೆಲೆ ಸಿಗದಂತಾಗಿದೆ. ಬಹುತೇಕ ತೋಟಗಳಲ್ಲಿ ಕೇವಲ ಶೇ.20 ಕಾಫಿ ಫಸಲು ಉಳಿದಿದೆ. ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಹೋಬಳಿಗಳಲ್ಲಿ ಶೇ.40 ಅರೇಬಿಕಾ ಕಾಫಿ ಗಿಡದಲ್ಲಿ ಉಳಿದಿದೆ. ಆದರೆ ಇದುವರೆಗೂ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅಕಾಲಿಕ ಮಳೆ ಮುಂದುವರಿದರೆ, ಸಂಪೂರ್ಣ ಫಸಲು ಮಣ್ಣು ಪಾಲಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.