Published
1 month agoon
By
Akkare Newsಮಂಗಳೂರಿನ ಕಿನ್ನಿಗೋಳಿ ವ್ಯಾಪ್ತಿಯ ಪಕ್ಷಿಕೆರೆಯ ಮನೆಯೊಂದರಲ್ಲಿ ಪತ್ನಿ ಹಾಗೂ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿ ಬಳಿಕ ತಾನು ರೈಲಿಗೆ ತಲೆ ಕೊಟ್ಟು ಹೋಟೆಲ್ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಕರಾವಳಿಯ ಸುತ್ತ ಮುತ್ತ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಪಕ್ಷಿಕೆರೆ ಗ್ರಾಮದಲ್ಲಿ ಹೋಟೆಲ್ ಉದ್ಯಮಿ ಕಾರ್ತಿಕ್ ಭಟ್ ಅವರು ತನ್ನ ಪತ್ನಿ ಹಾಗೂ ಮಗುವನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ ಹಾಗೂ ಸಹೋದರಿ ಕಣ್ಮಣಿಯನ್ನು ಬಂಧಿಸಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುವ ವೇಳೆ ಅವರಿಗೆ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನ ಪ್ರಕಾರ ತಾಯಿ ಮತ್ತು ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರಿಗೆ ದೊರೆತಿರುವ ಡೆತ್ ನೋಟ್ ನಲ್ಲಿ ಕಾರ್ತಿಕ್ ಭಟ್ ಅವರು, ಕೌಟುಂಬಿಕ ಕಲಹದ ಬಗ್ಗೆ ಉಲ್ಲೇಖಿಸಿದ್ದಾರೆ. ತನ್ನ ತಂದೆ ತಾಯಿ ಹಾಗೂ ಸಹೋದರಿ ವಿರುದ್ಧ ಕಾರ್ತಿಕ್ ಭಟ್ ಆರೋಪಿಸಿದ್ದಾರೆ. ಇವರೇ ನಮ್ಮ ಸಂಸಾರ ಹಾಳು ಮಾಡಿದರು. ಇಂತಹ ಅಪ್ಪ-ಅಮ್ಮ ಯಾರಿಗೂ ಸಿಗಬಾರದು. ಅತ್ತೆ ಮಾವ ನಮ್ಮ ಶವ ಸಂಸ್ಕಾರ ಮಾಡಬೇಕೆಂದು ಕಾರ್ತಿಕ್ ಬರೆದಿದ್ದಾರೆ. ಇದೀಗ ಕಾರ್ತಿಕ್ ತಂದೆ ತಾಯಿ ಸೋದರಿ ವಿರುದ್ಧ ಪ್ರಿಯಾಂಕ ಪೋಷಕರು ದೂರು ದಾಖಲಿಸಿದ್ದಾರೆ.
ಅಂದಹಾಗೆ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32), ಆತನ ಪತ್ನಿ ಪ್ರಿಯಾಂಕ (28), ಹೃದಯ್ (4) ಮೃತಪಟ್ಟವರು.
ಕಾರ್ತಿಕ್ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದು ಮೂಲ್ಕಿಯ ಬೆಳಾಯರುವಿನಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಕಾರ್ತಿಕ್ ಭಟ್ ಪಕ್ಷಿಕೆರೆ ಮುಖ್ಯ ಜಂಕ್ಷನ್ ನಲ್ಲಿರುವ ಹೋಟೆಲ್ ಅನ್ನು ತನ್ನ ತಂದೆ ತಾಯಿಯೊಂದಿಗೆ ನಡೆಸುತ್ತಿದ್ದರು. ಹತ್ತಿರದ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದರು. ನವೆಂಬರ್ 8 ರಂದು ಮಧ್ಯಾಹ್ನ 12:40 ರ ಸುಮಾರಿಗೆ ಕಾರ್ತಿಕ್ ಭಟ್ ಅವರು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾಪುರ ರೈಲು ನಿಲ್ದಾಣದ ಬಳಿ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಟ್ರಾಕ್ ಮಾಸ್ಟರ್ ನವೀನ್ ಅವರು ರೈಲ್ವೇ ನಿಲ್ದಾಣದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಶವ ಬಿದ್ದಿರುವುದನ್ನು ಪತ್ತೆ ಮಾಡಿದ್ದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.