Published
4 hours agoon
By
Akkare Newsಮಂಡ್ಯ: ಕಳೆದ ಮೂರು ದಿನಗಳಿಂದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಯುತ್ತಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಮುಕ್ತಾಯಗೊಂಡಿದೆ.
ಮುಂದಿನ ಸಮ್ಮೇಳನ 66 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಮಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಭಾನುವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ, ರಾಷ್ಟ್ರಕವಿ ಪ್ರಶಸ್ತಿ ಘೋಷಣೆ ಸೇರಿದಂತೆ ಆರು ಪ್ರಮುಖ ನಿರ್ಣಯಗಳನ್ನು ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ- 2022 ಸಮಗ್ರ ಜಾರಿಗೆ ಒತ್ತಾಯ
ಸರ್ಕಾರಿ ಕನ್ನಡ ಶಾಲೆಗೆ ಕಟ್ಟಡ, ವಾಚನಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು. ಖಾಲಿ ಇರುವ ಶಿಕ್ಚಕರ ಹುದ್ದೆ ಭರ್ತಿ ಮಾಡುವುದು.
ಸರೋಜಿನಿ ಮಹಿಷಿ ವರದಿ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಜತೆಗೆ ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿಯಿರುವ ಕೇಸ್‌ಗಳನ್ನು ಸರ್ಕಾರ ಎದುರಿಸಬೇಕು.
ಧಾರವಾಡದಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅತಿ ಶೀಘ್ರದಲ್ಲಿ ನಡೆಸಬೇಕು.
ರಾಷ್ಟ್ರಕವಿ ಪ್ರಶಸ್ತಿಯನ್ನ ಘೋಷಿಸಬೇಕು.
87ನೇ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಕಾರಣವಾದ ಸಚಿವ ಚಲುವರಾಯಸ್ವಾಮಿ ಸೇರಿ ಎಲ್ಲರಿಗೂ ಅಭಿನಂದನೆಗೆ ಮಂಡನೆ.
ಎಲ್ಲಾ ವಿಷಯಗಳನ್ನು ಅನುಮೋದನೆ ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನೊಂದು ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿರ್ಣಯಗಳನ್ನು ಅಂಗೀಕರಿಸುವಂತೆ ಕಸಾಪ ಮನವಿ ಮಾಡಲಿದೆ.
ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾಡು, ನುಡಿಯ ಡಿಂಡಿಮ ಮೊಳಗಿದೆ. ಮೊದಲ ದಿನ ಬರೋಬ್ಬರಿ 2 ಲಕ್ಷ ಜನ ಸೇರಿ ದಾಖಲೆ ಬರೆದಿದ್ದರೆ, ಎರಡು ಮತ್ತು ಮೂರನೇ ದಿನ ಕೂಡ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಾಗರೋಪಾದಿಯಲ್ಲಿ ಆಗಮಿಸಿದ್ದರು.
ಶನಿವಾರ 5 ವಿಷಯಗಳ ಕುರಿತು ಪ್ರಧಾನ ವೇದಿಕೆಯಲ್ಲಿ ಕವಿಗೋಷ್ಠಿ ನಡೆಸಲಾಯಿತು. ಸಂಜೆ ಸಮ್ಮೇಳಾನಾಧ್ಯಕ್ಷ ಗೊ.ರು.ಚೆ ಜತೆ ಸಂವಾದ ನಡೆಯಿತು. ರಾತ್ರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು.