Published
2 weeks agoon
By
Akkare Newsಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ ದಿನ, ಚುನಾವಣಾ ಅವ್ಯವಹಾರಗಳು ಮತ್ತು ಇವಿಎಂ ಟ್ಯಾಂಪರಿಂಗ್ ಆರೋಪದ ಮೇಲೆ ವಿರೋಧ ಪಕ್ಷದ ಸದಸ್ಯರಿಂದ ಪ್ರತಿಭಟನೆಗಳು ಕಂಡುಬಂದವು. ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ವಿಧಾನಸಭಾ ಕ್ಷೇತ್ರದ ಮರ್ಕಟ್ವಾಡಿ ಎಂಬ ಗ್ರಾಮವು ಚರ್ಚೆಯ ಕೇಂದ್ರಬಿಂದುವಾಯಿತು.
ಇವಿಎಂಗಳ ದುರುಪಯೋಗದ ಮೂಲಕ “ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ” ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಮರ್ಕಟವಾಡಿ ಗ್ರಾಮದ ನಿವಾಸಿಗಳು ಮತಯಂತ್ರಗಳನ್ನು ಬಳಸಿಕೊಂಡು ಅಣಕು ಮರು ಮತದಾನಕ್ಕೆ ಒತ್ತಾಯಿಸಿದರು. ನಿಷೇಧಾಜ್ಞೆ ಉಲ್ಲಂಘಿಸಿದ ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಅಪನಂಬಿಕೆ ಹರಡಿದ್ದಕ್ಕಾಗಿ ಸೊಲ್ಲಾಪುರ ಪೊಲೀಸರು ಕನಿಷ್ಠ 200 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಡಿಸೆಂಬರ್ 3 ರಂದು ಯೋಜಿಸಲಾಗಿದ್ದ ಅಣಕು ಮತದಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ವಿಧಾನಸಭೆಯಲ್ಲಿ ಪ್ರತಿಭಟನೆಯ ನಡುವೆಯೇ ಪ್ರತಿಪಕ್ಷಗಳು ವಿಶೇಷ ಅಧಿವೇಶನವನ್ನು ಬಹಿಷ್ಕರಿಸಿದವು.
“ಇವಿಎಂಗಳ ದುರ್ಬಳಕೆಯಿಂದ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ; ಆದ್ದರಿಂದ, ಮರ್ಕಟವಾಡಿ ಗ್ರಾಮದ ಜನರು ಮತಯಂತ್ರಗಳನ್ನು ಬಳಸಿಕೊಂಡು ಅಣಕು ಮರು ಮತದಾನಕ್ಕೆ ಒತ್ತಾಯಿಸಿದ್ದಾರೆ” ಎಂದು ಎನ್‌ಸಿಪಿ (ಶರದ್ ಪವಾರ್ ಶಿಬಿರ) ಶಾಸಕ ಉತ್ತಮರಾವ್ ಜಂಕರ್ ಹೇಳಿದರು.
ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಶಾಸಕ ಆದಿತ್ಯ ಠಾಕ್ರೆ ಸರ್ಕಾರವನ್ನು ಟೀಕಿಸಿ, “ಜನರಿಂದ ಆದೇಶವನ್ನು ನೀಡಲಾಗಿಲ್ಲ. ಆದರೆ, ಇವಿಎಂಗಳು ಮತ್ತು ಭಾರತದ ಚುನಾವಣಾ ಆಯೋಗದಿಂದ ನೀಡಲಾಗಿದೆ” ಎಂದು ಹೇಳಿದ್ದಾರೆ.
ಎನ್‌ಸಿಪಿ ನಾಯಕ ಶರದ್ ಪವಾರ್ ಮರ್ಕಟ್‌ವಾಡಿಗೆ ಭೇಟಿ ನೀಡಿ ಚುನಾವಣಾ ಫಲಿತಾಂಶದ ಬಗ್ಗೆ ಕಾಳಜಿ ಹೊಂದಿರುವ ಗ್ರಾಮಸ್ಥರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಪಕ್ಷದ ರಾಜ್ಯ ಘಟಕದ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗ್ರಾಮದಿಂದ ಮೆರವಣಿಗೆಯನ್ನು ಮುನ್ನಡೆಸುವ ಸಾಧ್ಯತೆಯಿದೆ.
ಇವಿಎಂಗಳ ದುರ್ಬಳಕೆ ಆರೋಪಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ಸರಣಿ ಪ್ರತಿಭಟನೆಗಳನ್ನು ಯೋಜಿಸಿವೆ. ಡಿಸೆಂಬರ್ 6 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿಯ ಅಂಗವಾಗಿ ದಾದರ್‌ನ ಚೈತ್ಯಭೂಮಿಯಲ್ಲಿ ಮರ್ಕಟವಾಡಿಯಿಂದ ಸಾಂಕೇತಿಕವಾಗಿ ಉತ್ತಮರಾವ್ ಜಂಕರ್ ಮಣ್ಣನ್ನು ಅರ್ಪಿಸಿದರು. ಮಣ್ಣನ್ನು ದೆಹಲಿಯಲ್ಲಿರುವ ರಾಹುಲ್ ಗಾಂಧಿ ಬಳಿ ಕೊಂಡೊಯ್ಯಲು ನಿರ್ಧರಿಸಲಾಗಿದ್ದು, ಅಲ್ಲಿ ರಾಜ್‌ಘಾಟ್‌ನಲ್ಲಿ ಅರ್ಪಣೆ ಮಾಡಲಾಗುವುದು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಚುನಾವಣಾ ಅವ್ಯವಹಾರದ ಆರೋಪಗಳನ್ನು ತಳ್ಳಿಹಾಕಿದರು. ಅವುಗಳನ್ನು ‘ಅನ್ಯಾಯ’ ಎಂದು ಕರೆದರು. ಎಂವಿಎ 31 ಲೋಕಸಭಾ ಸ್ಥಾನಗಳನ್ನು ಗೆದ್ದಾಗ ಅವರು ಇವಿಎಂಗಳನ್ನು ಪ್ರಶ್ನಿಸಲಿಲ್ಲ. ಅವರು ಪ್ರತಿಭಟಿಸಲು ಸ್ವತಂತ್ರರು. ಆದರೆ, ಸದನದ ಕಲಾಪಗಳಲ್ಲಿ ಭಾಗವಹಿಸಲು ಪ್ರಮಾಣ ವಚನ ಸ್ವೀಕರಿಸಬೇಕು ಎಂದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನ ಪ್ರಾರಂಭವಾಯಿತು. ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಳಂಬ್ಕರ್ ಅವರು ಹೊಸದಾಗಿ ಆಯ್ಕೆಯಾದ 173 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಆದರೆ, ಬಹುತೇಕ ಪ್ರತಿಪಕ್ಷಗಳ 115 ಶಾಸಕರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ.