Published
4 weeks agoon
By
Akkare News
ಮಂಗಳೂರು:ಮನರೇಗಾ ಸ್ವರೂಪ ಬದಲಾವಣೆಗೊಳಿಸಿ ಜನಸಾಮಾನ್ಯರಿಗೆ ಅನ್ಯಾಯ ಎಸಗಿದ ಹಾಗೂ ಮಹಾತ್ಮ ಗಾಂಧೀಜಿ ಹೆಸರು ಬದಲಿಸಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಫೆ. 9ರಿಂದ 12ರ ವರೆಗೆ ದ.ಕ. ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿ, ಸುಳ್ಯದಿಂದ ಮೂಲ್ಕಿಯವರೆಗೆ ಸುಮಾರು 100 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸುಳ್ಯದಿಂದ ಮೂಲ್ಕಿವರೆಗೆ
ಫೆ. 9ರಂದು ಬೆಳಗ್ಗೆ 8.30ಕ್ಕೆ ಸುಳ್ಯದ ಗಾಂಧಿನಗರದಲ್ಲಿ ಪಾದಯಾತ್ರೆ ಆರಂಭ ಗೊಂಡು ಕುಂಬ್ರ ಜಂಕ್ಷನ್‌ವರೆಗೆ ನಡೆಯಲಿದೆ. ಫೆ.10ರಂದು ಕುಂಬ್ರದಿಂದ ಕಲ್ಕಡ್ಕ, ಫೆ.11ರಂದು ಕಲ್ಕಡ್ಕದಿಂದ ಮಂಗಳೂರು ಲಾಲ್‌ಬಾಗ್ ಹಾಗೂ ಫೆ. 12ರಂದು ಲಾಲ್‌ಬಾಗ್‌ನಿಂದ ಮೂಲ್ಕಿವರೆಗೆ ಪಾದಯಾತ್ರೆ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಯಾತ್ರೆ ಆರಂಭಗೊಳ್ಳಲಿದ್ದು, ಪ್ರತಿದಿನ 25 ಕಿ.ಮೀ. ನಡೆಯುವ ಗುರಿ ಹೊಂದಲಾಗಿದೆ. ಪ್ರತಿದಿನ ಪಾದಯಾತ್ರೆಯ ಕೊನೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು. ಪಾದಯಾತ್ರೆಯ ಮೂಲಕ ಜನರಿಗೆ ಕೇಂದ್ರ ಸರಕಾರ ಮಾಡಿರುವ ಮೋಸವನ್ನು ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
20 ವರ್ಷದ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭಗ್ರಾಮೀಣ ಜನರಿಗೆ 100 ದಿನ ಕೂಲಿಗಾಗಿ ಮನರೇಗಾ ಕಾಯ್ದೆಯಾಗಿ ಜಾರಿಗೊಳಿಸಲಾಗಿತ್ತು. ಬಾವಿ, ಕೃಷಿ ಹೊಂಡ ಸೇರಿದಂತೆ ಸ್ವಂತದ ಕೆಲಸಗಳಿಗೂ ಕೂಲಿ ಕೊಡುವ ಯೋಜನೆಯಾಗಿತ್ತು. ಕೇಂದ್ರದ ಶೇ.
90 ಹಾಗೂ ರಾಜ್ಯದ 10ರಷ್ಟು ಅನುದಾನದೊಂ ದಿಗೆ ಗ್ರಾ. ಪಂ. ಸಂಪೂರ್ಣ ಹತೋಟಿ ಹೊಂದಿತ್ತು. ಆದರೆ ಇದೀಗ ಕೇಂದ್ರ ಸರಕಾರ ವಿಬಿ-ಜಿ ರಾಮ್-ಜಿ ಹೆಸರಿನೊಂದಿಗೆ ಯೋಜನೆಯನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಶೇ. 40ರಷ್ಟು ಅನುದಾನದ ಹೊರೆಯನ್ನು ರಾಜ್ಯಗಳಿಗೆ ವಿಧಿಸಿದೆ. ಕೇಂದ್ರ ತನಗೆ ಬೇಕಾದಂತೆ ಯೋಜನೆ ಬಳಿಸಿಕೊಂಡಿದ್ದು ಖಂಡನೀಯ. ಈ ಯೋಜನೆ ಹಿಂದಿನಂತೆ ದೇಶದ ಪ್ರತೀ ನಾಗರಿಕನಿಗೂ ಸಿಗುವಂತಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಜನಪ್ರಿಯ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆಸುವುದು ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿಸುವುದು. ಉದ್ಯೋಗ ಖಾತ್ರಿಯನ್ನು ತೆಗೆದು ಹಾಕುವುದು ಕೇಂದ್ರ ಸರಕಾರದ ಉದ್ದೇಶ. ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಸಲಾಗುವುದು ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೊ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ ಮತ್ತಿತರರಿದ್ದರು.