* ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ * 25 ದಿನದೊಳಗೆ ಬಾಕಿ ಕೆಲಸ ಮುಗಿಸಲು ಗಡುವು * ಭ್ರಷ್ಟಾಚಾರ, ರೌಡಿಸಂ ವಿರುದ್ಧ ಸಿಎಂ ಖಡಕ್ ವಾರ್ನಿಂಗ್ * ಆರು ಕಲ್ಯಾಣ ಯೋಜನೆಗಳ ತಕ್ಷಣ ಜಾರಿಗೆ ಆದೇಶ
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ನೀಡಲು ತೀವ್ರ ತಂತ್ರಗಾರಿಕೆ ನಡೆಸಿದ್ದಾರೆ. ಇಂದು ವಿಧಾನಸೌಧದಲ್ಲಿ ಎಲ್ಲಾ ಇಲಾಖೆಗಳ ಉನ್ನತ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ ಸಿಎಂ, ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಮಹತ್ವದ ಸಭೆ ನಡೆಸಿ, ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, ಇಲಾಖೆಗಳಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿರುವ ಬಾಕಿ ಕೆಲಸಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇವಲ 25 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಗಡುವು ನೀಡಿದರು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಿಂಚಿತ್ತೂ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದ ಅವರು, ನಮ್ಮ ಸರ್ಕಾರದಲ್ಲಿ ಜಾತಿ, ಧರ್ಮ ಅಥವಾ ಯಾವುದೇ ಪ್ರಭಾವಿ ವ್ಯಕ್ತಿಗಳ ಒತ್ತಡಗಳಿಗೆ ಮಣಿಯದೆ ಪಾರದರ್ಶಕವಾಗಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು. ಜನ ಮೆಚ್ಚುವಂತಹ ಆಡಳಿತ ನೀಡುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಅಧಿಕಾರಿಗಳು ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಸೇತುವೆಯಾಗಬೇಕು ಎಂದು ನಯವಾಗಿಯೇ ಖಡಕ್ ಸೂಚನೆ ನೀಡಿದರು.
ಇದೇ ವೇಳೆ ಇಲಾಖೆಗಳ ಪ್ರಗತಿಗಾಗಿ ಮುಂದಿನ 15 ದಿನಗಳಲ್ಲಿ ಸೂಕ್ತ ಆ್ಯಕ್ಷನ್ ಪ್ಲ್ಯಾನ್ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಸಿಎಂ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೌಡಿಸಂ, ಡ್ರಗ್ಸ್ ಮಾಫಿಯಾ ಹಾಗೂ ಜೂಜಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು. ನಿನ್ನೆಯಷ್ಟೇ ಸರ್ಕಾರ ಘೋಷಿಸಿರುವ ಆರು ಪ್ರಮುಖ ಕಲ್ಯಾಣ ಯೋಜನೆಗಳನ್ನು ತಕ್ಷಣವೇ ಜಾರಿಗೆ ತರಲು ಸೂಚಿಸಿದ ಡಿಕೆಶಿ, “ನನಗೆ ಇತಿಹಾಸ ಬರೆಯಲು ಅಥವಾ ಓದಲು ಇಷ್ಟವಿಲ್ಲ, ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದು ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗುವ ಮೂಲಕ ಇತಿಹಾಸ ನಿರ್ಮಿಸಬೇಕು” ಎಂದು ಮಾರ್ಮಿಕವಾಗಿ ನುಡಿದರು. ಆರ್ಥಿಕ ಮಿತಿಯೊಳಗೇ ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಹೊಸ ಅಭಿವೃದ್ಧಿ ನೀಲನಕ್ಷೆಯೊಂದಿಗೆ ಆಡಳಿತ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು.