Connect with us

ಇತರ

ಭಾರೀ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಮರುಸ್ಥಾಪನಾ ಕಾರ್ಯ ಸಮರೋಪಾದಿಯಲ್ಲಿ – ಸಾರ್ವಜನಿಕರ ಸಹಕಾರಕ್ಕೆ ಮೆಸ್ಕಾಂ ಮನವಿ

Published

on

ಪುತ್ತೂರು, ಕಡಬ ಹಾಗೂ ಸುಳ್ಯ ತಾಲ್ಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ನಿರಂತರ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ವಿತರಣಾ ಜಾಲಕ್ಕೆ ವ್ಯಾಪಕ ಹಾನಿಯಾಗಿದೆ. ಪರಿಣಾಮವಾಗಿ ವಿದ್ಯುತ್ ವ್ಯತ್ಯಯಗಳು ಹಾಗೂ ಗ್ರಾಹಕರಿಂದ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಈ ಭಾಗದಲ್ಲಿನ ಸುಮಾರು 90 ಶೇಕಡಾ ವಿದ್ಯುತ್ ಮಾರ್ಗಗಳು ರಸ್ತೆ ಬದಿ ಹಾಗೂ ಮರಗಳ ಕೆಳಭಾಗದಿಂದ ಹಾದು ಹೋಗುತ್ತಿರುವುದರಿಂದ, ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿವೆ. ವಿದ್ಯುತ್ ಮರುಸ್ಥಾಪನೆಗೂ ಮುನ್ನ ಅಂತಹ ಕೊಂಬೆಗಳನ್ನು ಸ್ಥಳದಲ್ಲಿಯೇ ತೆರವುಗೊಳಿಸಬೇಕಾಗಿರುವುದರಿಂದ ದುರಸ್ತಿ ಕಾರ್ಯಗಳಿಗೆ ಸಾಮಾನ್ಯ ಸಂದರ್ಭಗಳಿಗಿಂತ ಹೆಚ್ಚಿನ ಸಮಯ ಬೇಕಾಗುತ್ತಿದೆ. ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ಮೊಬೈಲ್ ಜಾಲ ಸಂಪರ್ಕದಲ್ಲಿಯೂ ವ್ಯತ್ಯಯ ಉಂಟಾಗಿದ್ದು, ದೋಷ ಪತ್ತೆ ಹಾಗೂ ಮರುಸ್ಥಾಪನಾ ಕಾರ್ಯಗಳ ಸಮನ್ವಯಕ್ಕಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರ ಸಂಪರ್ಕದಲ್ಲಿರಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಸಂಪರ್ಕಿಸಿದಾಗ ದೂರವಾಣಿ ಬ್ಯುಸಿ ಆಗುವ ಸಾಧ್ಯತೆ ಇರುತ್ತದೆ.

ಆದಾಗ್ಯೂ, ಮೆಸ್ಕಾಂ ವತಿಯಿಂದ ತುರ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಯಮಿತ ಸಿಬ್ಬಂದಿಯೊಂದಿಗೆ 60 ಮಂದಿ ಹೊರಗುತ್ತಿಗೆ ಸಿಬ್ಬಂದಿ, 6 ಹೆಚ್ಚುವರಿ ವಾಹನಗಳನ್ನು ನಿಯೋಜಿಸಲಾಗಿದ್ದು, ಸ್ಥಳೀಯ ತಂಡಗಳ ಸಹಕಾರದೊಂದಿಗೆ ಕಳೆದ ಮೂರು ದಿನಗಳಿಂದ ಪ್ರತಿದಿನ 260ಕ್ಕೂ ಹೆಚ್ಚು ಕಾರ್ಮಿಕರನ್ನು ದುರಸ್ತಿ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಈ ಅವಧಿಯಲ್ಲಿ 277 ಮುರಿದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ಸುಮಾರು ₹13 ಲಕ್ಷ ವೆಚ್ಚದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ 24 ಗಂಟೆಗಳೊಳಗೆ ವಿದ್ಯುತ್ ಸರಬರಾಜು ಮರುಸ್ಥಾಪಿಸಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರಂತರ ಶ್ರಮದ ಫಲವಾಗಿ ನಿನ್ನೆ ರಾತ್ರಿ ವೇಳೆಗೆ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಪುನಃಸ್ಥಾಪಿಸಲಾಗಿದ್ದು, ದಾಖಲಾಗಿದ್ದ ಎಲ್ಲ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗಿದೆ.

ಪ್ರಸ್ತುತವೂ ಭಾರೀ ಮಳೆಯ ಎಚ್ಚರಿಕೆ ಮುಂದುವರಿದಿರುವುದರಿಂದ ಹೊಸ ವಿದ್ಯುತ್ ವ್ಯತ್ಯಯಗಳು ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೆ ಮೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಹಾಗೂ ವಿದ್ಯುತ್ ತಂತಿಗಳು, ಮುರಿದ ಕಂಬಗಳು ಅಥವಾ ಅಪಾಯಕಾರಿ ವಿದ್ಯುತ್ ಉಪಕರಣಗಳ ಸಮೀಪ ಹೋಗದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಕೋರಲಾಗಿದೆ. ಸಾರ್ವಜನಿಕರಿಗೆ ಶೀಘ್ರ, ಸುರಕ್ಷಿತ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಒದಗಿಸಲು ಮೆಸ್ಕಾಂನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಹ ತಾಳ್ಮೆ ಮತ್ತು ಸಹಕಾರ ನೀಡುವಂತೆ ಮೆಸ್ಕಾಂ ವಿನಂತಿಸಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version