Connect with us

ಇತರ

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ; ಕೃಷ್ಣ ಬೈರೇಗೌಡ ಯೂಟರ್ನ್: ವಾಹನಗಳ ತೆರವು ಅಭಿಯಾನ ಜುಲೈ 10ರಿಂದ

Published

on

ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಆದರೆ ಈ ವಿಚಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಜಿಬಿಎ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದಿಲ್ಲ, ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿಂದ ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ. ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಸಂಬಂಧಿತ ಅಧಿಕಾರಿಗಳ ಜೊತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾದಚಾರಿ ಮಾರ್ಗಗಳಿಂದ ಬೀದಿ ಬದಿ ವ್ಯಾಪಾರಿಗಳಷ್ಟೇ ಅಲ್ಲದೆ, ವಿವಿಧ ಅಡೆತಡೆಗಳು, ಅನಾಥ ವಾಹನಗಳು ಹಾಗೂ ಅಕ್ರಮವಾಗಿ ನಿಲ್ಲಿಸಿರುವ ಪಾರ್ಕಿಂಗ್ ವಾಹನಗಳನ್ನು ಸಹ ತೆರವುಗೊಳಿಸಿ, ಸಾರ್ವಜನಿಕರಿಗೆ ಸುಗಮ ಹಾಗೂ ವ್ಯವಸ್ಥಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಎಂದು ಸೂಚಿಸಿದ್ದಾರೆ. ಈ ಸಂಬಂಧ ಎಲ್ಲ ಒತ್ತುವರಿಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಮುಖ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳನ್ನು ಹೊರತುಪಡಿಸಿ, ಉಳಿದ ವಾರ್ಡ್ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಬೆಂಬಲವೂ ದೊರೆಯುತ್ತದೆ. ಅಸಾಧ್ಯವೆನಿಸುವ ಕೆಲಸವನ್ನೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೆಂಗಳೂರಿನ ನಾಗರಿಕರಿಗೆ ಸುಗಮ, ಸುರಕ್ಷಿತ ಹಾಗೂ ವ್ಯವಸ್ಥಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿಕೊಡಬೇಕು ಎಂದಿದ್ದಾರೆ.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿದ ರಸ್ತೆಗಳಲ್ಲಿ ತಕ್ಷಣವೇ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಬೇಕು. ಇತರೆ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ನಿರಂತರವಾಗಿ ತೆರವುಗೊಳಿಸುವ ಕಾರ್ಯವೂ ಸಮಾನಾಂತರವಾಗಿ ನಡೆಯಬೇಕು. ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡ ಬಳಿಕ, ಅವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ನಂತರ ಸ್ಥಳೀಯ ನಾಗರಿಕರೊಂದಿಗೆ ಅಭಿವೃದ್ಧಿಪಡಿಸಿದ ಪಾದಚಾರಿ ಮಾರ್ಗಗಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯಬೇಕು ಎಂದಿದ್ದಾರೆ.

ಜುಲೈ 10ರಿಂದ ಅನಾಥ ವಾಹನಗಳ ತೆರವು ಅಭಿಯಾನ

ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಈಗಾಗಲೇ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು, ಜುಲೈ 10ರಿಂದ ನಗರದ ರಸ್ತೆ ಬದಿಗಳಲ್ಲಿ ನಿಂತಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರ ಸಮನ್ವಯದೊಂದಿಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಲಾಗಿದೆ. ನಗರದಲ್ಲಿ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಮುಂಭಾಗದಲ್ಲಿ ವಾಹನಗಳ ಪ್ರವೇಶಕ್ಕಾಗಿ ಪಾದಚಾರಿ ಮಾರ್ಗಗಳ ಮೇಲೆ ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಮುಂದಿನ ಹಂತದಲ್ಲಿ ಇಂತಹ ರ‍್ಯಾಂಪ್‌ಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version